ಪುತ್ತೂರು: ಕ್ಷುಲ್ಲಕ ಕಾರಣಕ್ಕಾಗಿ ವ್ಯಕ್ತಿವೋರ್ವನ ಮೇಲೆ ತಂಡವೊಂದು ಕತ್ತಿಯಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಪ್ರಕರಣ ದಕ್ಷಿಣ ಕನ್ನಡ ಜಿಲ್ಲೆಯ ಅರಶಿನಮಕ್ಕಿಯ ರೇಖ್ಯಾ ಎಂಬಲ್ಲಿ ನಡೆದಿದೆ.
ರೇಖ್ಯಾ ಎಂಬಲ್ಲಿ ಕಟ್ಟೆಮನೆ ನಿವಾಸಿ ಪ್ರಭಾಕರ ಆಚಾರಿ ಎಂಬುವರ ಪುತ್ರ ರಮೇಶ್ ಆಚಾರಿ (35) ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದಾರೆ. ಗುಂಡ್ಯಹೊಳೆಯ ದಡದಲ್ಲಿ ಊಟ ಮಾಡಲು ಕರೆದು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಗಾಯಾಳು ರಮೇಶ್ ತಿಳಿಸಿದ್ದಾರೆ. ನವೀನ್ ರೇಖ್ಯಾ, ಲೋಕೇಶ್, ಬೇಬಿ ಕಿರಣ್, ಗಿರೀಶ್, ಕೀರ್ತನ್ ಮತ್ತು ಪವನ್ ಎಂಬುವರ ತಂಡ ಹಲ್ಲೆ ನಡೆಸಿದ್ದಾರೆ ಎಂದು ರಮೇಶ್ ಆರೋಪಿಸಿದ್ದಾರೆ.
ಮರದ ಕೆಲಸ ಮಾಡುವ ರಮೇಶ್ ಆಚಾರಿ ಭಾನುವಾರ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ, ಕೀರ್ತನ್ ಬಂದು ಹೊಳೆಯಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ ಬಾ ಎಂದು ಕರೆದರು. ನಾನು ಊಟಕ್ಕೆ ಹೋಗಿದ್ದೆ. ಅಲ್ಲಿ ಅಮಲು ಪದಾರ್ಥ ಸೇವಿಸಿದ್ದ ಅವರು ಊಟ ಮಾಡುವ ಮೊದಲೇ ನನ್ನನ್ನು ರೇಗಿಸಲು ಆರಂಭಿಸಿದರು. ನೀನು ನಮ್ಮ ತಂಡದಲ್ಲಿ ಭಾಗವಹಿಸುತ್ತಿಲ್ಲ. ನಿನಗೆ ನಮಗಿಂತ ಬೇರೆಯವರೇ ಮುಖ್ಯವಾಗುತ್ತಾರೆ ಎಂದು ಅಸಭ್ಯವಾಗಿ ವರ್ತಿಸಿದಾಗ ನಾನು ಊಟ ಬಿಟ್ಟು ಬಂದೆ. ಬರುವಾಗ ನನ್ನನ್ನು ಹಿಡಿದುಕೊಂಡು ಹಲ್ಲೆ ನಡೆಸಿದರು. ಲೋಕೇಶ್ ಎಂಬಾತ ದೊಡ್ಡ ಕತ್ತಿಯಿಂದ ನನ್ನ ತಲೆಗೆ ಹೊಡೆದರು ಎಂದು ಗಾಯಾಳು ರಮೇಶ್ ದೂರಿದ್ದಾರೆ.
ಅರಶಿನಮಕ್ಕಿಯಲ್ಲಿ ನಡೆದ ಕೋಮುಗಲಭೆ ಸೇರಿದಂತೆ ಈ ಭಾಗದಲ್ಲಿ ನಡೆದ ಹಲವು ಗಲಭೆಯ ಪ್ರಕರಣ ಈ ನವೀನ್ ರೇಖ್ಯಾ ನೇತೃತ್ವದ ತಂಡ ಭಾಗವಹಿಸಿದೆ ಎಂದು ಹೇಳಲಾಗ್ತಿದೆ.
ಹಲ್ಲೆ ನಡೆಸಿದ ಆರೋಪಿ ನವೀನ್ ಬ್ಯಾಂಕ್ ವಂಚನೆ ಆರೋಪ ಸಹ ಎದುರಿಸುತ್ತಿದ್ದಾನೆ. ಬೇಬಿ ಕಿರಣ್ ಪ್ರಸ್ತುತ ಅರಶಿನಮಕ್ಕಿ ಸಿಎ ಬ್ಯಾಂಕ್ ನಿರ್ದೇಶಕರಾಗಿದ್ದಾನೆ. ಈ ತಂಡ ನಿರಂತರವಾಗಿ ಸಮಾಜಬಾಹಿರ ಕೃತ್ಯಗಳನ್ನು ನಡೆಸುತ್ತಿದ್ದಾರೆ. ಆದರೆ ತಂಡಕ್ಕೆ ರಾಜಕೀಯ ವ್ಯಕ್ತಿಗಳ ಅಭಯಹಸ್ತ ಇರುವ ಕಾರಣ ಕಾನೂನು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ರಮೇಶ್ ಆರೋಪ ಮಾಡಿದ್ದಾರೆ. ಗಾಯಾಳುವಿನ ದೂರಿನಂತೆ ಆರೋಪಿಗಳ ವಿರುದ್ಧ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.