ಮಂಗಳೂರು: ಪಾಸ್ಪೋರ್ಟ್ಗಾಗಿ ನಕಲಿ ಎಸ್ಎಸ್ಎಲ್ಸಿ ಸರ್ಟಿಫಿಕೆಟ್ ಸೃಷ್ಟಿಸಿದ ಆರೋಪಿಗೆ ಮಂಗಳೂರಿನ ಎರಡನೇ ಸಿಜೆಎಂ ನ್ಯಾಯಾಲಯವು ಜೈಲು ಶಿಕ್ಷೆ ವಿಧಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕತ್ತರಿಗುಡ್ಡೆಯ ನಿವಾಸಿ ಮೊಹಮ್ಮದ್ ಶರೀಫ್ (31) ಶಿಕ್ಷೆಗೊಳಗಾದ ಆರೋಪಿ.
ಈತ ವಿಸಿಟಿಂಗ್ ವೀಸಾದಲ್ಲಿ ದುಬೈಗೆ ತೆರಳಿ ನೌಕರಿ ಮಾಡಿದ್ದ. ಖಾಯಂ ಆಗಿ ವಿದೇಶದಲ್ಲಿ ಕೆಲಸ ಮಾಡಲು ವೀಸಾ ಪಡೆಯಲು ಎಸ್ಎಸ್ಎಲ್ಸಿ ಅಂಕಪಟ್ಟಿ ಅಗತ್ಯವಿತ್ತು. ಅದಕ್ಕಾಗಿ ಸೆಂದಿಲ್ ಎಂಬಾತನ ಮೂಲಕ ಎಸ್ಎಸ್ಎಲ್ಸಿ ಅಂಕಪಟ್ಟಿ ನಕಲಿ ಮಾಡಿ, ತನ್ನ ಖಾಯಂ ವಿಳಾಸಕ್ಕೆ ಜೋಡಣೆ ಮಾಡಿಕೊಂಡು 6 ವರ್ಷಗಳ ಕಾಲ ದುಬೈನಲ್ಲಿ ಕೆಲಸ ಮಾಡಿದ್ದ.
ಬಳಿಕ ಭಾರತಕ್ಕೆ ಬಂದು ಪಾಸ್ಪೋರ್ಟ್ ನವೀಕರಿಸಲು ಹೋದಾಗ ಮಂಗಳೂರು ಪಾಸ್ ಪೋರ್ಟ್ ಸೇವಾ ಕೇಂದ್ರದ ಅಧಿಕಾರಿಗೆ ಸಂಶಯ ಬಂದು ವಿಚಾರಣೆ ನಡೆಸಿದಾಗ ನಕಲಿ ಎಸ್ಎಸ್ಎಲ್ಸಿ ಅಂಕಪಟ್ಟಿ ಬಳಸಿರುವುದು ಬೆಳಕಿಗೆ ಬಂದಿದೆ. ಬಳಿಕ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಈ ಕುರಿತಂತೆ ಪ್ರಕರಣ ದಾಖಲಿಸಲಾಗಿತ್ತು. ಈ ಬಗ್ಗೆ ಮಂಗಳೂರು ಎರಡನೇ ಸಿಜೆಎಂ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿತ್ತು.
ಇದನ್ನೂ ಓದಿ: ಮಹಿಳೆಯರಿಗೆ ಅಶ್ಲೀಲ ವಿಡಿಯೋ ಕಳುಹಿಸಿ ಕಿರುಕುಳ: ಆರೋಪಿ ಅಂದರ್
ವಾದ ವಿವಾದ ಆಲಿಸಿದ 2ನೇ ಸಿಜೆಎಂ ನ್ಯಾಯಾಲಯದ ನ್ಯಾಯಾಧೀಶರಾದ ಶಿಲ್ಪಾ ಎ.ಜಿ. ಅವರು ಆರೋಪಿಗೆ ಭಾರತ ದಂಡ ಸಂಹಿತೆ ಕಲಂ 420 ಅಪರಾಧಕ್ಕಾಗಿ 1 ವರ್ಷ ಕಠಿಣ ಸಜೆ, 10 ಸಾವಿರ ದಂಡ, ದಂಡ ಪಾವತಿಸಲು ತಪ್ಪಿದ್ದಲ್ಲಿ ಒಂದು ತಿಂಗಳ ಸಜೆ, ಭಾರತ ದಂಡ ಸಂಹಿತೆ ಕಲಂ 468 ಅಪರಾಧಕ್ಕಾಗಿ 1 ವರ್ಷ ಕಠಿಣ ಸಜೆ, 10 ಸಾವಿರ ದಂಡ ಪಾವತಿಸುವಂತೆ ಆದೇಶಿಸಿದ್ದಾರೆ.
ನಕಲಿ ಅಂಕಪಟ್ಟಿ ತಯಾರಿಸಿದ ಸೆಂದಿಲ್ ಪತ್ತೆಯಾಗದ ಕಾರಣ ಆತನ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿರಲಿಲ್ಲ. ಸರ್ಕಾರದ ಪರವಾಗಿ ಹಿರಿಯ ಸರ್ಕಾರಿ ಅಭಿಯೋಜಕರಾದ ಮೋಹನ್ ಕುಮಾರ್ ಬಿ. ಅವರು ವಾದ ಮಂಡಿಸಿದ್ದರು.