ಉಪ್ಪಿನಂಗಡಿ(ದ.ಕ): ಬೈಕ್ ಡಿವೈಡರ್ಗೆ ಡಿಕ್ಕಿ ಹೊಡೆದ ಪರಿಣಾಮ ನವವಿವಾಹಿತ ಸವಾರ ಮೃತಪಟ್ಟ ದುರ್ಘಟನೆ ಮಂಗಳೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಉಪ್ಪಿನಂಗಡಿ ಜಂಕ್ಷನ್ ಬಳಿ ಮಂಗಳವಾರ ತಡರಾತ್ರಿ ಸಂಭವಿಸಿದೆ.
ಕಡಬ ತಾಲೂಕಿನ ಹಳೆನೇರಂಕಿ ಗ್ರಾಮದ ಕಲ್ಲೇರಿ ನಿವಾಸಿ ಕಿಶೋರ್(29) ಮೃತಪಟ್ಟ ಯುವಕ. ಈತನಿಗೆ ತಿಂಗಳ ಹಿಂದೆಯಷ್ಟೇ ವಿವಾಹವಾಗಿತ್ತು. ಮೃತರು ತಾಯಿ, ಪತ್ನಿ ಮತ್ತು ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.
ಮಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಕಿಶೋರ್ ರಾತ್ರಿ ಕೆಲಸ ಮುಗಿಸಿ ವಾಪಸ್ ಮನೆಗೆ ಬರುತ್ತಿದ್ದ ವೇಳೆ ಅಪಘಾತ ನಡೆದಿದೆ. ನಿಯಂತ್ರಣ ಕಳೆದುಕೊಂಡ ಬೈಕ್ ಡಿವೈಡರ್ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಕಿಶೋರ್ನನ್ನು ಸ್ಥಳೀಯರು ಕೂಡಲೇ ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲು ಕರೆದುಕೊಂಡು ಹೋದರಾದರೂ ದಾರಿ ಮಧ್ಯೆ ಕೊನೆಯುಸಿರುಳೆದಿದ್ದಾರೆ.
ಇದನ್ನೂ ಓದಿ: ಒಂದು ಕೋಣಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ ಮೂರು ಹಳ್ಳಿಯ ಜನ!
ಮಂಗಳೂರಿನ ತೊಕ್ಕೊಟ್ಟುವಿನಲ್ಲಿ ಪ್ರಿಂಟಿಂಗ್ ಪ್ರೆಸ್ ಒಂದರಲ್ಲಿ ಉದ್ಯೋಗಿಯಾಗಿದ್ದ ಅವರಿಗೆ ಕಳೆದ ಡಿಸೆಂಬರ್ ತಿಂಗಳಿನಲ್ಲಿ ವಿವಾಹ ನಡೆದಿತ್ತು. ಪ್ರತಿದಿನ ಅವರು ಮಂಗಳೂರಿನಿಂದ ಹಳೇ ನೆರಂಕಿಯ ತನ್ನ ಮನೆಗೆ ಬೈಕಿನಲ್ಲಿ ಹೋಗಿ ಬರುತಿದ್ದರು.
ಚಿನ್ನದ ಸರ ನಾಪತ್ತೆ
ಈ ಮಧ್ಯೆ ಕಿಶೋರ್ ಧರಿಸಿಕೊಂಡಿದ್ದ ನಾಲ್ಕು ಪವನ್ ತೂಕದ ಚಿನ್ನದ ಸರ ನಾಪತ್ತೆಯಾಗಿದೆ ಎಂದು ಮೃತರ ಸಂಬಂಧಿಕರು ತಿಳಿಸಿದ್ದಾರೆ.