ಮಂಗಳೂರು: ಕೂದಲನ್ನು ಆರೈಕೆ ಮಾಡುವುದಕ್ಕೆ ಮಹಿಳೆಯರು ಹೆಚ್ಚಿನ ಆಸಕ್ತಿ ವಹಿಸುತ್ತಾರೆ. ಜೊತೆಗೆ, ಕೂದಲ ಸೌಂದರ್ಯಕ್ಕಾಗಿ ವಿಶೇಷ ಶ್ರಮವಹಿಸುತ್ತಾರೆ. ಕೂದಲನ್ನು ಉದ್ದ ಬೆಳೆಸುವುದಕ್ಕೂ ಹೆಚ್ಚಿನವರು ಆಸಕ್ತಿ ವಹಿಸುತ್ತಾರೆ. ಈ ರೀತಿ ಉದ್ದ ಕೂದಲು ಬೆಳೆಸಿದವರಿಗಾಗಿ ಮಂಗಳೂರಿನಲ್ಲಿ ವಿಶೇಷ ಸ್ಪರ್ಧೆ ಆಯೋಜಿಸಲಾಗಿತ್ತು.
ಮಂಗಳೂರಿನ ಕದ್ರಿ ಕಂಬಳ ರಸ್ತೆಯಲ್ಲಿರುವ ಸ್ಪಿನ್ ಯುನಿಸೆಕ್ಸ್ ಸೆಲೂನ್ನಲ್ಲಿ ಈ ವಿಶೇಷ ಸ್ಪರ್ಧೆ ನಡೆಯಿತು.
ಈ ಕುರಿತು ಸ್ಪಿನ್ ಸೆಲೂನ್ ಅಡ್ಮಿನ್ ನವೀನ್ ಮಾತನಾಡಿ, 'ಮಂಗಳೂರಿನಲ್ಲಿ ಮೊದಲ ಬಾರಿಗೆ ಇಂತಹ ವಿಶಿಷ್ಟ ಸ್ಪರ್ಧೆಯೊಂದನ್ನು ಆಯೋಜಿಸಲಾಗಿದೆ. ಈ ಸ್ಪರ್ಧೆಯಲ್ಲಿ 78 ಮಂದಿ ಮಹಿಳೆಯರು ಮತ್ತು 12 ಮಂದಿ ಹೆಣ್ಣು ಮಕ್ಕಳು ಭಾಗಿಯಾಗಿದ್ದರು. ಮಹಿಳೆಯರಲ್ಲಿ ಉದ್ದ ಕೂದಲಿನ ಬಗ್ಗೆ ವಿಶೇಷ ಆಸಕ್ತಿಯಿರುವುದರಿಂದ ಈ ರೀತಿಯ ವಿಭಿನ್ನ ಸ್ಪರ್ಧೆ ಆಯೋಜಿಸಲಾಗಿದೆ. ಮುಂದೆ ಕ್ಯಾನ್ಸರ್ ರೋಗಿಗಳಿಗೆ ಕೂದಲು ಕೊಡುವ ಕ್ಯಾಂಪೇನ್ ಮಾಡುವ ಚಿಂತನೆಯಲ್ಲಿದ್ದೇವೆ' ಎಂದರು.
ಮಹಿಳೆಯರ ವಿಭಾಗದಲ್ಲಿ ಮೊದಲ ಸ್ಥಾನ ಪಡೆದ ಕಾವ್ಯ ಮಾತನಾಡಿ, 'ತಂದೆ ತಾಯಿ ಆಸೆಯಂತೆ ಉದ್ದ ಕೂದಲು ಬೆಳೆಸಿದೆ. ಉದ್ದ ಕೂದಲು ಹೊಂದಿರುವುದು ಹೆಮ್ಮೆ' ಎಂದರು.
ಈ ಸ್ಪರ್ಧೆಯಲ್ಲಿ ಭಾಗಿಯಾಗಿದ್ದವರಲ್ಲಿ ಮಹಿಳೆಯರ ವಿಭಾಗದಲ್ಲಿ 48 ಇಂಚು ಉದ್ದ ಕೂದಲಿನ ಕಾವ್ಯ ಶೆಟ್ಟಿ ಮೊದಲ ಸ್ಥಾನ, 45 ಇಂಚು ಉದ್ದ ಕೂದಲಿನ ರಶ್ಮಿತಾ ದ್ವಿತೀಯ ಸ್ಥಾನ, 42 ಇಂಚು ಉದ್ದದ ಕೂದಲಿನ ಶಿಲ್ಪಾ ತೃತೀಯ ಸ್ಥಾನ, ಹೆಣ್ಣು ಮಕ್ಕಳ ವಿಭಾಗದಲ್ಲಿ 41 ಇಂಚು ಉದ್ದ ಕೂದಲಿನ ಹರ್ಷಿತಾ ಮೊದಲ ಸ್ಥಾನ, 36 ಇಂಚು ಉದ್ದ ಕೂದಲಿನ ಅನ್ವಿ ಶೆಟ್ಟಿ ದ್ವಿತೀಯ ಸ್ಥಾನ, 31 ಇಂಚು ಉದ್ದ ಕೂದಲಿನ ಖುಷಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಮಹಿಳೆಯರ ವಿಭಾಗದಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದವರಿಗೆ ಕ್ರಮವಾಗಿ ₹10 ಸಾವಿರ ನಗದು ಮತ್ತು ಗಿಪ್ಟ್ ವೋಚರ್, ₹6 ಸಾವಿರ ನಗದು ಮತ್ತು ಗಿಪ್ಟ್ ವೋಚರ್, ₹ 3 ಸಾವಿರ ನಗದು ಮತ್ತು ಗಿಪ್ಟ್ ವೋಚರ್, ಮಕ್ಕಳ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದವರಿಗೆ ₹ 3 ಸಾವಿರ ನಗದು ಮತ್ತು ಗಿಪ್ಟ್ ವೋಚರ್, ದ್ವಿತೀಯ ಸ್ಥಾನ ಪಡೆದವರಿಗೆ ₹2 ಸಾವಿರ ನಗದು ಮತ್ತು ಗಿಫ್ಟ್ ವೋಚರ್, ತೃತೀಯ ಸ್ಥಾನ ಪಡೆದವರಿಗೆ ರೂ 1 ಸಾವಿರ ನಗದು ಮತ್ತು ಗಿಫ್ಟ್ ವೋಚರ್ ಬಹುಮಾನವಾಗಿ ನೀಡಲಾಗಿದೆ.
ಇದನ್ನೂ ಓದಿ: ಹಿಜಾಬ್-ಕೇಸರಿ ಶಾಲು ವಿವಾದದ ನಡುವೆ ರಾಜ್ಯದಲ್ಲಿ 9, 10ನೇ ತರಗತಿ ಆರಂಭ