ಉಪ್ಪಿನಂಗಡಿ: ಕಡಬ ತಾಲೂಕಿನ ಆಲಂಕಾರು ಸಮೀಪ ಪೊಲೀಸರು ವ್ಯಕ್ತಿಯೊಬ್ಬನನ್ನು ಮಕ್ಕಳ ಎದುರೇ ಕಾಲರ್ ಪಟ್ಟಿ ಹಿಡಿದೆಳೆದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿ ಸ್ಥಳೀಯರು ಕಡಬ ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಆಲಂಕಾರು ಪೇಟೆ ಸಮೀಪ ಪೊಲೀಸರು ವಾಹನ ತಪಾಸಣೆ ಮಾಡುತ್ತಿದ್ದರು. ಈ ಸಮಯದಲ್ಲಿ ತನ್ನ ಮಕ್ಕಳೊಂದಿಗೆ ವ್ಯಕ್ತಿಯೊಬ್ಬ ದಾರಿಯಲ್ಲಿ ಬಂದಿದ್ದು, ಮಕ್ಕಳು ಮಾಸ್ಕ್ ಧರಿಸಿರಲಿಲ್ಲ ಎನ್ನಲಾಗಿದೆ. ಇವರನ್ನು ತಡೆದ ಕಡಬ ಪೊಲೀಸರು, ವ್ಯಕ್ತಿಯ ಕಾಲರ್ ಪಟ್ಟಿ ಹಿಡಿದು ಮಕ್ಕಳ ಎದುರಿನಲ್ಲೇ ಅವ್ಯಾಚ್ಯ ಶಬ್ದ ಬಳಸಿ ಅವಹೇಳನಕಾರಿಯಾಗಿ ನಿಂದಿಸಿದ್ದಾರೆ ಎನ್ನಲಾಗಿದೆ. ನಂತರ ಸ್ಥಳದಲ್ಲಿ ಗಲಾಟೆ ಆಗುತ್ತಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು.
ಈ ಕುರಿತು ಈಟಿವಿ ಜೊತೆಗೆ ಮಾತನಾಡಿದ ಕಡಬ ಠಾಣಾಧಿಕಾರಿ ರುಕ್ಮ ನಾಯ್ಕ್, ನಾವು ವಾಹನ ತಪಾಸಣೆ ಮಾಡುವ ಸಮಯದಲ್ಲಿ ಮಕ್ಕಳೊಂದಿಗೆ ಬಂದ ವ್ಯಕ್ತಿಯೊಬ್ಬ ಮಾಸ್ಕ್ ಧರಿಸಿರಲಿಲ್ಲ, ಮಾತ್ರವಲ್ಲದೇ ಈ ವ್ಯಕ್ತಿ ಮದ್ಯಪಾನ ಮಾಡಿರುವ ಬಗ್ಗೆಯೂ ಅನುಮಾನ ಮೂಡಿತ್ತು. ಈ ಹಿನ್ನೆಲೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಲು ಇಲಾಖೆ ವಾಹನಕ್ಕೆ ಹತ್ತುವಂತೆ ಸೂಚಿಸಿದೆ.
ಆದರೆ, ಆತ ಸ್ಥಳದಲ್ಲಿ ಗಲಾಟೆ ಮಾಡಲು ಮುಂದಾಗಿದ್ದು, ಮಕ್ಕಳನ್ನು ನೋಡಿ ಮಾನವೀಯತೆ ದೃಷ್ಟಿಯಿಂದ ಆತನಿಗೆ ಎಚ್ಚರಿಕೆ ನೀಡಿ, ದಂಡ ವಿಧಿಸಿ ಕಳುಹಿಸಿದ್ದೇನೆಯೇ ಹೊರತು, ಯಾವುದೇ ಅವ್ಯಾಚ್ಯ ಪದಗಳನ್ನು ಬಳಸಿಲ್ಲ ಎಂದು ಹೇಳಿದ್ದಾರೆ.