ಮಂಗಳೂರು: ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿ ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಆಕಾಶ್ ಭವನ್ ಶರಣ್ ಯಾನೆ ಶರಣ್ ಪೂಜಾರಿ, ತನ್ನನ್ನು ಎನ್ಕೌಂಟರ್ ಮಾಡುವ ಸಾಧ್ಯತೆಯಿದೆ ಎಂದು ನ್ಯಾಯಾಧೀಶರಿಗೆ ಬರೆದಿದ್ದಾನೆ ಎನ್ನಲಾದ ಪತ್ರವೊಂದು ವೈರಲ್ ಆಗಿದೆ.
ಆಕಾಶ್ ಭವನ್ ಶರಣ್ ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಕಳೆದ ಎರಡು ವರ್ಷದಿಂದ ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾನೆ. ಇತ್ತೀಚೆಗೆ ಬಂಟ್ವಾಳದಲ್ಲಿ ತುಳು ಚಿತ್ರನಟ ಹಾಗೂ ರೌಡಿಶೀಟರ್ ಸುರೇಂದ್ರ ಬಂಟ್ವಾಳ ಹತ್ಯೆ ಪ್ರಕರಣ ಸಂಬಂಧ ಪೊಲೀಸರು ಜೈಲಿನಲ್ಲಿರುವ ಆಕಾಶ್ ಭವನ್ ಶರಣ್ನನ್ನು ವಿಚಾರಣೆ ನಡೆಸಲು ಸಿದ್ಧತೆ ನಡೆಸಿದ್ದಾರೆ. ಹೀಗಾಗಿ ಆಕಾಶಭವನ್ ಶರಣ್ ಬಂಟ್ವಾಳ ಜೆಎಂಎಫ್ಸಿ ಮುಖ್ಯನ್ಯಾಯಾಧೀಶರಿಗೆ ಈ ಪತ್ರ ಬರೆದಿದ್ದಾನೆ ಎನ್ನಲಾಗಿದೆ.
ಈ ಪತ್ರದಲ್ಲಿ 'ನನ್ನನ್ನು ಯಾರದೋ ಕೃತ್ಯದ ಭಾಗವಾಗಿ ವಿಚಾರಣೆ ಹೆಸರಿನಲ್ಲಿ ಕಾರಾಗೃಹದಿಂದ ಹೊರಗೆ ಕೊಂಡೊಯ್ಯಲಿದ್ದು, ಎನ್ಕೌಂಟರ್ ಮಾಡುವ ಯೋಜನೆ ನಿಶ್ಚಯವಾಗಿ ಕಾಣುತ್ತಿದೆ'. ಆದ್ದರಿಂದ ನನ್ನ ಹಾಜರಾತಿಗೆ ವಿನಾಯಿತಿ ನೀಡಿ ಎಂದು ಬರೆಯಲಾಗಿದೆ. ಈ ಪತ್ರದ ಸತ್ಯಾಸತ್ಯತೆ ಬಗ್ಗೆ ಸ್ಪಷ್ಟತೆಯಿಲ್ಲದಿದ್ದರೂ ವೈರಲ್ ಆಗಿರುವ ಪತ್ರ ಜಿಲ್ಲೆಯಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.