ಸುಳ್ಯ: ಬಿಜೆಪಿಯ ಯುವ ಕಾರ್ಯಕರ್ತ ದಿವಂಗತ ಪ್ರವೀಣ್ ನೆಟ್ಟಾರು ಹತ್ಯೆ ಬಳಿಕ ಮುಚ್ಚಿದ್ದ ಪ್ರವೀಣ್ ಮಾಲೀಕತ್ವದ ಅಕ್ಷಯಾ ಚಿಕನ್ ಸೆಂಟರ್ (ಕೋಳಿ ಅಂಗಡಿ) ಮತ್ತೆ ಇನ್ನೋರ್ವ ಹಿಂದೂ ಮುಖಂಡ ಯುವಕನ ನೇತೃತ್ವದಲ್ಲಿ ಶುರು ಆಗಿದೆ.
ಜುಲೈ 26ರಂದು ದುಷ್ಕರ್ಮಿಗಳಿಂದ ಹತ್ಯೆಗೊಳಗಾದ ಪ್ರವೀಣ್ ನೆಟ್ಟಾರು ಮಾಲೀಕತ್ವದ ಬೆಳ್ಳಾರೆಯ ಮಾಸ್ತಿಕಟ್ಟೆಯಲ್ಲಿರುವ ಚಿಕನ್ ಸೆಂಟರ್ ಅನ್ನು ಅವರ ಕುಟುಂಬಸ್ಥರು ಮುನ್ನಡೆಸಲು ಉತ್ಸಾಹ ತೋರದ ಕಾರಣ ಬೆಳ್ಳಾರೆ ಭಾಗದ ಬಿಜೆಪಿ ಮತ್ತು ಹಿಂದೂ ಕಾರ್ಯಕರ್ತ ಯತೀಶ್ ಮುರ್ಕೆತ್ತಿ ಜವಾಬ್ದಾರಿ ವಹಿಸಿಕೊಂಡು ಪೂಜೆ ನೆರವೇರಿಸಿ ವಹಿವಾಟು ಪುನಾರಂಭಿಸಿದ್ದಾರೆ.
ಯತೀಶ್ ಈ ಹಿಂದೆ ಎಬಿವಿಪಿಯಲ್ಲಿ ಜಿಲ್ಲಾ ಸಂಚಾಲಕರಾಗಿಯೂ ಬಳಿಕ ಸುಳ್ಯ ತಾಲೂಕು ಜವಾಬ್ದಾರಿಯಲ್ಲಿ ತೊಡಗಿಸಿಕೊಂಡಿದ್ದರು. ಈಗಾಗಲೇ ಇವರು ಕೋಳಿ ಸಾಕಾಣಿಕೆ ಮಾಡುತ್ತಿದ್ದು, ಇದೀಗ ಚಿಕನ್ ಸೆಂಟರ್ ಪ್ರಾರಂಭಿಸುತ್ತಿದ್ದಾರೆ. "ತಾನು ಮತಾಂಧ ಶಕ್ತಿಗಳಿಗೆ ಹೆದರದೆ ಈ ವ್ಯವಹಾರವನ್ನು ಮುಂದುವರೆಸುತ್ತಿದ್ದೇನೆ. ಅಂಥ ಶಕ್ತಿಗಳ ನೀಚ ಕೆಲಸಕ್ಕೆ ಹಿಂದೂ ಸಮಾಜ ಎಂದಿಗೂ ಎದೆಗುಂದುವುದಿಲ್ಲ ಎಂಬ ಸಂದೇಶವನ್ನು ಈ ಮೂಲಕ ನೀಡುತ್ತಿದ್ದೇನೆ. ಈ ಅಂಗಡಿಯು ಹಳೆಯ ಹೆಸರಿನಲ್ಲೇ ಮುಂದುವರೆಯಲಿದ್ದು, ಗ್ರಾಹಕರು ಸಹಕರಿಸಬೇಕು" ಎಂದು ಯತೀಶ್ ಹೇಳಿದರು.
ಪ್ರವೀಣ್ ನೆಟ್ಟಾರು ಹತ್ಯೆ ಆರೋಪಿಗಳ ಬಂಧನವಾದ ಬಳಿಕ ಹಲವು ಆಯಾಮಗಳಲ್ಲಿ ತನಿಖೆ ನಡೆಸಿದ್ದ ಪೊಲೀಸರಿಗೆ ಕೋಳಿ ಅಂಗಡಿಯೂ ಕೊಲೆಗೆ ಒಂದು ಕಾರಣ ಎನ್ನುವ ವಿಷಯ ಗೊತ್ತಾಗಿತ್ತು. ಮಾತ್ರವಲ್ಲದೇ ಮೊದಲು ಬಂಧನವಾದ ಪ್ರಮುಖ ಆರೋಪಿ ಶಫೀಕ್ ಎಂಬಾತನ ತಂದೆ ಪ್ರವೀಣ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರಂತೆ. ಜಟ್ಕಾ-ಹಲಾಲ್ ವಿವಾದ ಹಾಗೂ ಹಲವು ಹಿಂದೂ ಯುವಕರಿಗೆ ಪ್ರವೀಣ್ ಕೋಳಿ ಅಂಗಡಿಗೆ ಪ್ರೋತ್ಸಾಹ ನೀಡಿದ್ದೇ ಘಟನೆಗೆ ಕಾರಣ ಅನ್ನೋದು ಕೂಡಾ ತನಿಖೆ ವೇಳೆ ತಿಳಿದುಬಂದ ಪ್ರಮುಖ ಅಂಶವಾಗಿತ್ತು.
ಇದನ್ನೂ ಓದಿ: ಪ್ರವೀಣ್ ನೆಟ್ಟಾರು ಹತ್ಯೆ ತನಿಖೆ: ಎನ್ಐಎಗೆ ಜಿಲ್ಲೆಯಿಂದ 9 ಪೊಲೀಸರ ನೇಮಕ