ಮಂಗಳೂರು: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ನಡೆಸುವ ಹಿನ್ನೆಲೆ ವಿವಿಧ ಪುಣ್ಯಕ್ಷೇತ್ರಗಳ ಪ್ರಸಾದ ಕೊಂಡೊಯ್ಯುವ ಕಾರ್ಯ ನಡೆಯುತ್ತಿದೆ. ವಿಹಿಂಪ ಬಜರಂಗದಳದ ವತಿಯಿಂದ ದ.ಕ.ಜಿಲ್ಲೆಯ ಪ್ರಸಿದ್ಧ ಸಪ್ತಕ್ಷೇತ್ರಗಳ ಮಣ್ಣು, ತೀರ್ಥಗಳನ್ನು ನಿನ್ನೆ ರವಾನೆ ಮಾಡಲಾಯಿತು.
ಕಟೀಲು ಶ್ರೀದುರ್ಗಾಪರಮೇಶ್ವರಿ ಕ್ಷೇತ್ರದ ಪವಿತ್ರ ಮಣ್ಣು, ನಂದಿನಿ ನದಿಯ ತೀರ್ಥ, ಶ್ರೀಕ್ಷೇತ್ರ ಧರ್ಮಸ್ಥಳದ ಪವಿತ್ರ ಮಣ್ಣು, ಪ್ರಸಾದ ನೇತ್ರಾವತಿ ನದಿಯ ತೀರ್ಥ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ಹುತ್ತದ ಮಣ್ಣು, ಕುಮಾರಧಾರಾ ನದಿಯ ತೀರ್ಥ, ಪೊಳಲಿ ಶ್ರೀ ರಾಜರಾಜೇಶ್ವರಿ ಕ್ಷೇತ್ರದ ಮಣ್ಣು, ಕದ್ರಿ ಶ್ರೀಮಂಜುನಾಥ ದೇವಳದ ಗೋಮುಖದ ತೀರ್ಥ, ಮಣ್ಣು, ಪ್ರಸಾದ, ಶ್ರೀ ಮಂಗಳಾದೇವಿ ದೇವಳದ ಪವಿತ್ರ ಮಣ್ಣು, ಪ್ರಸಾದ, ಶ್ರೀ ಸೋಮೇಶ್ವರ ದೇವಾಲಯದ ಮಣ್ಣು ಹಾಗೂ ಪ್ರಸಾದವನ್ನು ಪ್ರಾರ್ಥಿಸಿ ಎಲ್ಲಾ ಕಡೆಯಿಂದಲೂ ಅಯೋಧ್ಯೆಗೆ ರವಾನೆ ಮಾಡಲಾಗಿದೆ.