ಮಂಗಳೂರು: ರಾಜ್ಯದಲ್ಲಿ ಶೀಘ್ರದಲ್ಲೇ ನೂತನ ಸಾರಿಗೆ ಮಸೂದೆ ತರಲು ಸಿದ್ಧತೆ ನಡೆಸಲಾಗುತ್ತಿದೆ. ನೂತನ ಸಾರಿಗೆ ಮಸೂದೆ ಜಾರಿಗೆ ತರಲು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿಗೆ ಸೂಚಿಸಿದ್ದಾರೆ. ಈ ಬಗ್ಗೆ ಸಾರಿಗೆ ಸಚಿವರ ಜತೆಗೂ ಮಾತುಕತೆ ನಡೆಸಲಾಗಿದೆ. ಇನ್ನು 2-3 ವಾರದೊಳಗೆ ಸಚಿವ ಸಂಪುಟದ ಒಪ್ಪಿಗೆಗೆ ಮಸೂದೆ ಬರಲಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.
ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಕಾರ್ಮಿಕ ಇಲಾಖೆಯ ಹಿರಿಯ ಅಧಿಕಾರಿಗಳ ಜತೆ ಜಿಲ್ಲೆಯ ಕಾರ್ಮಿಕ ಸಂಘಟನೆಗಳ ಮುಖಂಡರೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಪ್ರಸ್ತುತ ಶೇ.11ರಷ್ಟು ಸಾರಿಗೆ ಸೆಸ್ ಸಂಗ್ರಹವಾಗುತ್ತಿದೆ. ಅದರಲ್ಲಿ ಶೇ.27ರಷ್ಟು ಮೊತ್ತವನ್ನು ಪಡೆದು ರಾಜ್ಯಾದ್ಯಂತ ಇರುವ 40-50 ಲಕ್ಷದಷ್ಟು ಸಾರಿಗೆ ವ್ಯವಸ್ಥೆಯ ಕಾರ್ಮಿಕರಿಗೆ (ಗ್ಯಾರೇಜ್ ಕಾರ್ಮಿಕರು ಸೇರಿ) ಗುರುತಿನ ಚೀಟಿಯ ಜತೆಗೆ ಸಾಮಾಜಿಕ ಭದ್ರತಾ ಯೋಜನೆಗಳನ್ನು ನೀಡುವುದು ಸೇರಿದಂತೆ ಅನೇಕ ಅಂಶಗಳು ಈ ಸಾರಿಗೆ ಮಸೂದೆಯಲ್ಲಿ ಇರಲಿವೆ ಎಂದರು.
ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ 13 ಸಾವಿರ ಕೋಟಿ ರೂ. ಇದ್ದ ಆದಾಯ ಈಗ 6 ಕೋಟಿ ರೂ.ಗೆ ಇಳಿದಿದೆ. ಇಲಾಖೆಯ ಆದಾಯ ಹೆಚ್ಚಿಸಲು ಕಟ್ಟಡಗಳ ಜಿಯೋ ಮ್ಯಾಪಿಂಗ್ ಮಾಡಲು ಮುಂದಾಗಿದ್ದೇವೆ. ಈ ಮೂಲಕ ಸೆಸ್ ಕಟ್ಟಡಗಳನ್ನು ಪತ್ತೆ ಹಚ್ಚಿ, ಸೆಸ್ ಸಂಗ್ರಹ ಮಾಡಲಾಗುವುದು. ಮಂಡಳಿಯನ್ನು ಮುಂದಿನ ದಿನಗಳಲ್ಲಿ ದೇಶದಲ್ಲೇ ನಂ.1 ಸ್ಥಾನಕ್ಕೆ ತರುವುದಾಗಿ ಹೇಳಿದರು.
ಸಿನಿ ಸೆಸ್ ಸಂಗ್ರಹಿಸುವ ಮಸೂದೆಯ ಪ್ರಸ್ತಾವನೆಯನ್ನು ಸರ್ಕಾರದ ಮುಂದೆ ಇಟ್ಟಿದ್ದೇವೆ. ಚಿತ್ರ ಮಂದಿರಗಳು ಸಂಗ್ರಹಿಸುವ ಪ್ರತಿ ಟಿಕೆಟ್ ಮೊತ್ತದ ಶೇ. 1ರಷ್ಟು ಸೆಸ್ ಪಡೆದು, ಅದಕ್ಕೆ ಸರ್ಕಾರದಿಂದ ಸ್ವಲ್ಪ ಮೊತ್ತ ಹಾಕಿ ಚಿತ್ರರಂಗದ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಯೋಜನೆ ಜಾರಿಗೊಳಿಸುವ ಉದ್ದೇಶವೂ ಇದೆ ಎಂದರು.
ಕಾರ್ಮಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮೊಹಿಸೀನ್, ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಭಾರತಿ ಡಿ, ಅಪರ ಕಾರ್ಮಿಕ ಆಯುಕ್ತ ಮಂಜುನಾಥ್, ಕಾರ್ಖಾನೆ ಮತ್ತು ಬಾಯ್ಲರುಗಳ ಇಲಾಖೆ ಅಪರ ನಿರ್ದೇಶಕ ನಂಜಪ್ಪ, ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರು ಸಭೆಯಲ್ಲಿದ್ದರು.
ಬಿಜೆಪಿ ಮಾಜಿ ಸಚಿವ, ಮಾಜಿ ಶಾಸಕರು ಕಾಂಗ್ರೆಸ್ಗೆ: ಧಾರವಾಡದಲ್ಲಿ 2-3 ಮಂದಿ ಬಿಜೆಪಿಯ ಮಾಜಿ ಮಂತ್ರಿಗಳು, ಮಾಜಿ ಶಾಸಕರು ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ ಎಂದು ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರನ್ನು ಸಂಪರ್ಕ ಮಾಡದೇ ಅವರ ಹೆಸರು ಹೇಳುವುದು ತಪ್ಪಾಗುತ್ತದೆ. ಹಾಗಾಗಿ ಹೆಸರು ಹೇಳಲ್ಲ. ಆದರೆ 2-3 ಮಂದಿ ನಾಯಕರು ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ ಎಂದು ಹೇಳಿದರು.
ಸತೀಶ್ ಜಾರಕಿಹೊಳಿ ದುಬೈ ಪ್ರವಾಸದ ಕುರಿತು ಪ್ರತಿಕ್ರಿಯಿಸಿದ ಅವರು, ದುಬೈಗೆ ಹೋಗೋದು ತಪ್ಪಾ? ಅವರು ವೆಕೇಷನ್‌ಗೆ ಹೋಗಿರಬಹುದು. ಅತ್ಯಂತ ಶಿಸ್ತು ಇರುವ ಹಲವು ನಾಯಕರಲ್ಲಿ ಜಾರಕಿಹೊಳಿ ಕೂಡ ಒಬ್ಬರು. ಅವರು ನಿಜವಾದ ಕಾಂಗ್ರೆಸ್‌ಮ್ಯಾನ್, ಅದರಲ್ಲಿ ಏನೂ ಡೌಟ್ ಬೇಡ ಎಂದು ಹೇಳಿದರು.
ಲೋಕಸಭೆ ಚುನಾವಣೆ ಮೊದಲು ಕಾಂಗ್ರೆಸ್ ಸರ್ಕಾರ ಬೀಳಲಿದೆ ಎಂಬ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ ಲಾಡ್, ಪ್ರಜಾಪ್ರಭುತ್ವ ಮಾದರಿಯಲ್ಲಿ ಆಯ್ಕೆಯಾದ ಸರ್ಕಾರಗಳನ್ನು ಕುದುರೆ ವ್ಯಾಪಾರ ಮೂಲಕ ಬೀಳಿಸುವುದು ಬಿಜೆಪಿಯವರಿಗೆ ಹವ್ಯಾಸವಾಗಿದೆ. ಈಗಾಗಲೇ 9 ರಾಜ್ಯಗಳ ಸರ್ಕಾರಗಳನ್ನು ಇದೇ ರೀತಿ ಬೀಳಿಸಿದ್ದಾರೆ. ಶಾಸಕರ ಖರೀದಿಯ ಕುದುರೆ ವ್ಯಾಪಾರದಲ್ಲಿ ಎಕ್ಸ್‌ಪರ್ಟ್ ಅವರು. ಇಂತಹ ವ್ಯವಹಾರ ಮಾಡಿ ಅವರಿಗೆ ಅಭ್ಯಾಸ ಇದೆ. 136 ಶಾಸಕರಿರುವ ಸರ್ಕಾರವನ್ನು ಬೀಳಿಸ್ತೀವಿ ಎಂದರೆ ಏನರ್ಥ?. ಇದನ್ನೆಲ್ಲ ಬಿಟ್ಟು ಕೇಂದ್ರ ಸರ್ಕಾರ 10 ವರ್ಷದಲ್ಲಿ ಏನು ಮಾಡಿದೆ ಎಂಬುದರ ಬಗ್ಗೆ ಮಾತನಾಡಲಿ ಎಂದು ಸವಾಲು ಹಾಕಿದರು.
ಲಿಂಗಾಯತ, ಒಕ್ಕಲಿಗರನ್ನು ಬಿಜೆಪಿ ಟಾರ್ಗೆಟ್ ಮಾಡುತ್ತಿದೆ ಎಂಬ ಪ್ರಶ್ನೆಗೆ, ಬಿಜೆಪಿಯವರು ಯಾರನ್ನು ಟಾರ್ಗೆಟ್ ಮಾಡ್ತಾರೋ ಮಾಡಲಿ. ನಾವು ಬಡವರನ್ನು ಟಾರ್ಗೆಟ್ ಮಾಡ್ತೀವಿ. ಎಲ್ಲರಿಗೆ ಸಮಬಾಳು, ಸಮಪಾಲು ಸಿದ್ಧಾಂತದಲ್ಲಿ ಹೋಗ್ತಿದ್ದೇವೆ. ಅವರೇನು ಮಾಡ್ತಾರೋ ಮಾಡಲಿ ಎಂದರು.
ಅಸಂಘಟಿತ ಕಾರ್ಮಿಕರಿಗೆ ಯುನಿವರ್ಸಲ್ ಕಾರ್ಡ್: ಅಸಂಘಟಿತ ಕಾರ್ಮಿಕರಿಗೆ ಯುನಿವರ್ಸಲ್ ಕಾರ್ಡ್ ತರುವ ಚಿಂತನೆ ನಡೆಸಲಾಗಿದ್ದು, ಈ ಬಗ್ಗೆ ಹೊಸ ಕಾಯ್ದೆ ಜಾರಿಗೊಳಿಸುವ ನಿರ್ಧಾರ ಸರ್ಕಾರದ ಮುಂದಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದ್ದಾರೆ.
ಕಾರ್ಮಿಕ ಸಚಿವರಾಗಿ ಮೊದಲ ಬಾರಿಗೆ ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನಕ್ಕೆ ಭೇಟಿ ನೀಡಿ ಕಾರ್ಯಕರ್ತರ ಜೊತೆ ಮಾತನಾಡಿದ ಅವರು, ಸ್ವಿಗ್ಗಿ, ಅಮೆಜಾನ್, ಫಿಪ್ ಕಾರ್ಟ್ ಸೇರಿದಂತೆ ಆನ್ ಲೈನ್ ವ್ಯವಸ್ಥೆಯಲ್ಲಿ ದುಡಿಯುತ್ತಿರುವ ರಾಜ್ಯದ 4 ಲಕ್ಷ ಕಾರ್ಮಿಕರಿಗೆ ವಿಶೇಷ ಕಾರ್ಯಕ್ರಮ ರೂಪಿಸಲು ರಾಹುಲ್ ಗಾಂಧಿ ಅವರು ಭಾರತ್ ಜೋಡೊ ಸಂದರ್ಭದಲ್ಲಿ ಸೂಚಿಸಿದ್ದು, ಅದರಂತೆ ಮುಖ್ಯಮಂತ್ರಿಯವರು ಹಣ ಬಿಡುಗಡೆ ಮಾಡಿದ್ದಾರೆ.
ಇವರಿಗೆ ಎರಡು ತಿಂಗಳುಗಳಲ್ಲಿ ಕಾರ್ಡ್ ವಿತರಿಸಿ ಶೀಘ್ರದಲ್ಲಿ ಸಾಮಾಜಿಕ ಭದ್ರತಾ ಯೋಜನೆಗಳನ್ನು ಪ್ರಾರಂಭಿಸುತ್ತೇವೆ. ವಾಣಿಜ್ಯ ಸಾರಿಗೆ ಇಲಾಖೆಯಲ್ಲಿ ಪರವಾನಗಿ ಹೊಂದಿವವರಿಗೆ, ಚಾಲಕರು, ಕ್ಲೀನರ್, ಮೆಕ್ಯಾನಿಕಲ್ ಕೆಲಸಗಾರರು ಸೇರಿದಂತೆ ಸುಮಾರು 50 ಲಕ್ಷ ಮಂದಿಗೆ ಸಾಮಾಜಿಕ ಭದ್ರತಾ ಯೋಜನೆಗಳನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಜನವರಿ-ಫೆಬ್ರವರಿ ಒಳಗಾಗಿ ಟ್ರಾನ್ಸ್ ಪೋರ್ಟ್ ಬೋರ್ಡ್ ರಚಿಸುತ್ತೇವೆ. ಹೆಚ್ಚು ಸೆಸ್ ಸಂಗ್ರಹವಾದರೆ ಟೈಲರ್, ನೇಕಾರರು, ಕೂಲಿ ಕಾರ್ಮಿಕರು ಸೇರಿದಂತೆ ಅಸಂಘಟಿತ ಕಾರ್ಮಿಕರಿಗೆ ಅನುಕೂಲಕರವಾಗಲಿದ್ದು, ಈ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಈ ಸಂದರ್ಭ ದ. ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಇಬ್ರಾಹೀಂ ಕೋಡಿಜಾಲ್, ಮಮತಾ ಗಟ್ಟಿ, ಲುಕ್ಮಾನ್ ಬಂಟ್ವಾಳ, ಲಾರೆನ್ಸ್ ಡಿಸೋಜ, ಬಿ. ಎಂ ಅಬ್ಬಾಸ್ ಅಲಿ, ಮನೋರಾಜ್ ರಾಜೀವ, ಮೆರಿಲ್ ರೇಗೋ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ : ಅಧಿಕಾರ ಹಂಚಿಕೆ ವಿಚಾರ ಜನರ ಸಮಸ್ಯೆಯಲ್ಲ: ಸಚಿವ ಸಂತೋಷ್ ಲಾಡ್