ಪುತ್ತೂರು : ದಲಿತ ಅಪ್ರಾಪ್ತೆ ಮೇಲೆ ಅತ್ಯಾಚಾರ ನಡೆಸಿ ಆಕೆ ಮಗುವಿಗೆ ಜನ್ಮ ನೀಡಿದ ಪ್ರಕರಣದ ಆರೋಪಿ ಎಂದು ಬಾಲಕಿ ಹೆಸರಿಸಿರುವ ಕುದ್ಕಾಡಿ ನಾರಾಯಣ ರೈ ಅನಾರೋಗ್ಯ ಕಾರಣ ನೀಡಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ತೋಟದ ಕೆಲಸಕ್ಕೆ ಹೋಗುತ್ತಿದ್ದಾಗ ಅತ್ಯಾಚಾರ ನಡೆಸಿದ್ದಾರೆ ಎಂದು ಬಾಲಕಿ ಆರೋಪಿಸಿರುವ ನಾರಾಯಣ ರೈ ಅವರನ್ನು ಎರಡು ದಿನ ಪೊಲೀಸರ ವಶಕ್ಕೆ ಒಪ್ಪಿಸಿ ಪುತ್ತೂರು ಸೆಷನ್ಸ್ ನ್ಯಾಯಾಲಯ ಆದೇಶಿಸಿತ್ತು. ಆದೇಶದ ಬೆನ್ನಲ್ಲೇ ಅನಾರೋಗ್ಯದ ಹಿನ್ನೆಲೆ ನ್ಯಾಯಾಲಯದ ಅನುಮತಿಯೊಂದಿಗೆ ನಾರಾಯಣ ರೈ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕುದ್ಕಾಡಿ ನಾರಾಯಣ ರೈ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ಪುತ್ತೂರು ನ್ಯಾಯಾಲಯದಲ್ಲಿ ವಜಾಗೊಂಡಿತ್ತು. ಹೈಕೋರ್ಟಿನಲ್ಲಿ ಅವರು ಖ್ಯಾತ ವಕೀಲರೋರ್ವರ ಮೂಲಕ ನಿರೀಕ್ಷಣಾ ಜಾಮೀನು ಪಡೆಯಲು ಪ್ರಯತ್ನಿಸುತ್ತಿದ್ದರು.
ಈ ಮಧ್ಯೆ ಅವರ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದರು. ಅಲ್ಲದೆ, ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿ ನಾರಾಯಣ ರೈ ಬಂಧಿಸಲು ಆಗ್ರಹಿಸಿದ್ದವು. ಈ ಬೆಳವಣಿಗೆಗಳ ನಡುವೆ ಅ.27ರಂದು ನಾರಾಯಣ ರೈ ಪುತ್ತೂರಿನ ಸೆಷನ್ಸ್ ನ್ಯಾಯಾಲಯಕ್ಕೆ ಹಾಜರಾಗಿ ತಮ್ಮ ವಕೀಲರ ಮೂಲಕ ಮಧ್ಯಂತರ ಜಾಮೀನಿಗೆ ಅರ್ಜಿ ಸಲ್ಲಿಸಿದರು.
ಈ ಬಗ್ಗೆ ಮಾಹಿತಿ ಅರಿತ ಪೊಲೀಸ್ ಅಧಿಕಾರಿಗಳು ನ್ಯಾಯಾಲಯಕ್ಕೆ ಹಾಜರಾಗಿ ವಿಶೇಷ ಸರ್ಕಾರಿ ಅಭಿಯೋಜಕರ ಮೂಲಕ ಜಾಮೀನು ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸಿದರಲ್ಲದೆ , ಬಾಲಕಿ ಆರೋಪ ಮಾಡಿದ್ದ ಕಾರಣ ವಿಚಾರಣೆಗಾಗಿ ನಾರಾಯಣ ರೈಯವರನ್ನು ಎರಡು ದಿನ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದರು.
ಇದನ್ನೂ ಓದಿ: ರಾಜ್ಯದಲ್ಲಿಂದು 282 ಜನರಿಗೆ ಕೋವಿಡ್ ಸೋಂಕು ದೃಢ: 13 ಮಂದಿ ಸಾವು