ಮಂಗಳೂರು: ಜಗತ್ತಿಗೆ ಭಗವದ್ಗೀತೆ ಎಂಬ ಮನೋವೈಜ್ಞಾನಿಕ ಗ್ರಂಥವನ್ನು ಕೊಟ್ಟಾತ ಕೃಷ್ಣ. ಯಾವ ಪ್ರಶ್ನೆಗೂ ಅದರಲ್ಲಿ ಉತ್ತರ ಸಿಗುತ್ತದೆ. ಜಗತ್ತಿನ ಮನೋವೈಜ್ಞಾನಿಕ ಪರಿಕಲ್ಪನೆಯ ಭೂತ, ವರ್ತಮಾನ ಭವಿಷ್ಯತ್ತಿಗೂ ಉಳಿಯಬಲ್ಲ ಕೃತಿ ಭಗವದ್ಗೀತೆ ಎಂದು ಪುತ್ತೂರು ವಿವೇಕಾನಂದ ಕಾಲೇಜಿನ ಸಂಸ್ಕೃತ ಪ್ರಾಧ್ಯಾಪಕ ಡಾ.ಶ್ರೀಶ ಕುಮಾರ್ ಅಭಿಪ್ರಾಯಪಟ್ಟರು.
ದ.ಕ.ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಹಯೋಗದೊಂದಿಗೆ ನಗರದ ಪುರಭವನದಲ್ಲಿ ನಡೆದ ಶ್ರೀಕೃಷ್ಣ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ, ಜಗತ್ತಿಗೆ ಆಡಳಿತ ನಿರ್ವಹಣೆಯ ಗ್ರಂಥವನ್ನು ನೀಡಿದವನೂ ಕೃಷ್ಣ. ಅಮೆರಿಕಾ, ಜರ್ಮನಿಯಲ್ಲಿ ಎಂಬಿಎ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ಭಗವದ್ಗೀತೆ. ಭಗವದ್ಗೀತೆಯನ್ನು ಓದಿ ಅಧ್ಯಯನ ಮಾಡಿದರೆ ಅವರು ಒಳ್ಳೆಯ ಮ್ಯಾನೇಜರ್ ಆಗಬಹುದು ಎಂಬುದು ಅಲ್ಲಿನ ನಂಬಿಕೆ. ಕೃಷ್ಣ ಒಳ್ಳೆಯ ಮ್ಯಾನೇಜರ್. ಜಗತ್ತಿನ ಆಡಳಿತ ನಿರ್ವಹಣೆಯ ಮೊದಲ ಪಠ್ಯಪುಸ್ತಕ ಭಗವದ್ಗೀತೆ. ಹೇಗೆ ಆಡಳಿತ ನಿರ್ವಹಣೆ ಮಾಡಬೇಕೆಂಬುದಕ್ಕೆ ಕೃಷ್ಣ ಸಾಕ್ಷಿ ಎಂದು ಹೇಳಿದರು.
ಪರಿಸರ ಸಂರಕ್ಷಣೆಯ ಗಂಭೀರ ಜವಾಬ್ದಾರಿ ತೆಗೆದುಕೊಂಡವ ಕೃಷ್ಣ. ಆತ ಗೋವರ್ಧನ ಗಿರಿಧಾರಿ. ಇಂದ್ರ ಅತಿಯಾಗಿ ಮಳೆ ಸುರಿಸಿದಾಗ ಗೋವರ್ಧನ ಗಿರಿಯನ್ನೆತ್ತಿ ಗೋವಳರನ್ನು ರಕ್ಷಸಿದ ಪ್ರಕೃತಿ ಪೂಜಕ ಕೃಷ್ಣ. ಇಂದು ಭಾರತದಲ್ಲಿ ಕೃಷಿ, ಗೋರಕ್ಷೆ, ವಾಣಿಜ್ಯ ಈ ಮೂರು ಉದ್ಯೋಗ ಮೇಲ್ಪಂಕ್ತಿಯಲ್ಲಿ ಇದೆ. ಇಂದಿಗೂ ಭಾರತೀಯರ ಪ್ರಧಾನ ಉದ್ಯೋಗ ಕೃಷಿ. ಗುಜರಾತ್, ದ್ವಾರಕೆ, ಉತ್ತರ ಕರ್ನಾಟಕ ಮುಂತಾದ ಪ್ರದೇಶದ ಜನರು ಇಂದಿಗೂ ಹಾಲನ್ನೇ ನಂಬಿ ಬದುಕು ಸಾಗಿಸುತ್ತಿದ್ದಾರೆ. ಹಿಂದೆ ಕೊಟ್ಟಿಗೆಯಲ್ಲಿರುವ ದನಗಳನ್ನು ಲೆಕ್ಕ ಹಾಕಿ ಶ್ರೀಮಂತಿಕೆಯನ್ನು ಅಳೆಯುತ್ತಿದ್ದರು. ಆದರೆ ಇಂದು ಮಾತ್ರ ದನ ಕಟ್ಟಿದ್ದರೆ ಪಾಪ ಬಡವ ಹಾಲು ಮಾರಿ ಬದುಕುತ್ತಿದ್ದಾನೆ ಎಂಬಲ್ಲಿಗೆ ಬಂದಿದೆ ನಮ್ಮ ಸ್ಥಿತಿ. ನೀರಿಗೆ ವಿಷವಿಕ್ಕಿದ ಕಾಳಿಂಗನನ್ನು ಮರ್ದನ ಮಾಡಿದವ ಕೃಷ್ಣ. ಇಂದು ನಮ್ಮ ಕಾರ್ಖಾನೆಗಳು ವಿಷದ ನೀರನ್ನು ನೀರಿಗೆ ಬಿಡುವ ಕಾಳಿಂಗಗಳಾಗಿವೆ. ಜೊತೆಗೆ ವಟಪತ್ರಶಾಯಿ. ಯಾರ ತಲೆಬಿಸಿಯೂ ಇಲ್ಲದೆ ಅಶ್ವತ್ಥ ಎಲೆಯ ಮೇಲೆ ಮಲಗಿದವ. ಇದೆಲ್ಲವೂ ಆತನ ಪರಿಸರ ಪ್ರೇಮಕ್ಕೆ ದ್ಯೋತಕವಾಗಿದೆ ಎಂದರು.
ಈ ಸಂದರ್ಭ ದ.ಕ.ಜಿಲ್ಲಾ ಕಸಪಾ ಅಧ್ಯಕ್ಷ ಪ್ರದೀಪ ಕುಮಾರ್ ಕಲ್ಕೂರ, ತಾಪಂ ಅಧ್ಯಕ್ಷ ಮುಹಮ್ಮದ್ ಮೋನು, ದ.ಕ.ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧ್ಯಕ್ಷ ರಾಜೇಶ್ ಮತ್ತಿತರರು ಉಪಸ್ಥಿತರಿದ್ದರು.