ಮಂಗಳೂರು: ಕೋವಿಡ್ ಸೋಂಕು ಸಮುದಾಯಕ್ಕೆ ಹರಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಹೆಚ್ಚು ಜನರನ್ನು ಪರೀಕ್ಷೆಗೆ ಒಳಪಡಿಸುವುದರಿಂದ ಸೋಂಕಿತರು ಯಾರೆಂದು ತಿಳಿಯಲು ಸಾಧ್ಯ. ಕೆಲವು ರಾಜ್ಯಗಳಲ್ಲಿ ಪರಿಣಾಮ ಕಾರಿಯಾದ ಪರೀಕ್ಷೆಗಳನ್ನು ನಡೆಸುವ ಕಾರಣ ಹೆಚ್ಚು ಹೆಚ್ಚು ಸೋಂಕಿತರು ಸಿಗುತ್ತಿದ್ದಾರೆ. ಆದರೆ, ನಮ್ಮ ರಾಜ್ಯದಲ್ಲಿ ಇನ್ನೂ ಪರಿಣಾಮ ಕಾರಿಯಾದ ಪರೀಕ್ಷೆಗಳನ್ನು ಇನ್ನೂ ನಡೆಸಲಾಗುತ್ತಿಲ್ಲ ಎಂದು ಮಾಜಿ ಸಚಿವ ರಮಾನಾಥ ರೈ ಬೇಸರ ವ್ಯಕ್ತಪಡಿಸಿದರು.
ಮಂಗಳೂರಿನ ಸರ್ಕ್ಯೂಟ್ ಹೌಸ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಸೋಂಕು ನಿಯಂತ್ರಣ ಮಾಡಲು ದಕ್ಷಿಣ ಕನ್ನಡ ಜಿಲ್ಲೆಯನ್ನು ಒಳಗೊಂಡಂತೆ ರಾಜ್ಯದಲ್ಲಿ ಸಮುದಾಯದ ಪರೀಕ್ಷೆಯನ್ನು ರ‍್ಯಾಪಿಡ್ ರೀತಿಯಲ್ಲಿ ಮಾಡಬೇಕು ಎಂದರು. ಕೋವಿಡ್ ಸೋಂಕಿನಿಂದ ದಕ್ಷಿಣ ಕನ್ನಡದ ಬಂಟ್ವಾಳ ತಾಲೂಕಿನ ಓರ್ವ ಮಹಿಳೆ ಮೃತಪಟ್ಟಿದ್ದು, ವೈಯಕ್ತಿಕವಾಗಿ ಅತ್ಯಂತ ನೋವಿನ ಸಂಗತಿ. ಈ ಮಧ್ಯೆ ಮೃತ ಮಹಿಳೆಯ ನೆರೆ ಮನೆಯ ಮತ್ತೋರ್ವ ಮಹಿಳೆಗೂ ಸೋಂಕು ದೃಢ ಪಟ್ಟಿದೆ. ಇದು ಸಮುದಾಯವಾಗಿ ಹರಡಿರುವ ಸಾಧ್ಯತೆಯಿದ್ದು, ಇದು ಬಂಟ್ವಾಳದ ಜನತೆಗೆ ಮಾತ್ರವಲ್ಲ ಎಲ್ಲರಿಗೂ ಆತಂಕದ ವಿಚಾರವಾಗಿದೆ ಎಂದರು.
ಪ್ರಾರಂಭದಲ್ಲಿ ವಿದೇಶದಿಂದ ಬಂದವರನ್ನು ವಿಮಾನ ನಿಲ್ದಾಣದಲ್ಲಿ ತಪಾಸಣೆ ಮಾಡಲಾಗುತ್ತಿರಲಿಲ್ಲ. ಈ ಮೂಲಕ ದೃಢಗೊಂಡ ಸೋಂಕಿತರನ್ನು ಕ್ವಾರೆಂಟೈನ್ನಲ್ಲಿ ಇರಿಸುತ್ತಿದ್ದರೆ, ಇದೀಗ ಸೋಂಕಿತರನ್ನು ಹುಡುಕಾಡುವ ಪ್ರಮೇಯ ಬರುತ್ತಿರಲಿಲ್ಲ ಎಂದರು.