ಮಂಗಳೂರು: 71 ವರ್ಷದ ವೃದ್ಧನನ್ನು ಅಪಹರಿಸಿ ಕೊಲೆಗೈದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ ಕೋಣಾಜೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಮಂಗಳೂರಿನ ಮಲಾರ್ನ ಪಳ್ಳಿಯಬ್ಬ (71) ಎಂಬ ವೃದ್ಧರೊಬ್ಬರನ್ನು ಅ. 29ರಂದು ಅಪಹರಿಸಿ ಇರಾ ಗ್ರಾಮದ ಮೂರೂರು ಡಬಲ್ ರೋಡ್ ನಿರ್ಜನ ಪ್ರದೇಶದ ಗುಡ್ಡ ಜಾಗದಲ್ಲಿ ಕೊಲೆ ಮಾಡಿ ಮೃತದೇಹವನ್ನು ಹೊಂಡ ತೆಗೆದು ಮುಚ್ಚಲಾಗಿತ್ತು. ಈ ಕೊಲೆ ಪ್ರಕರಣ ನಿನ್ನೆ ಬೆಳಕಿಗೆ ಬಂದಿದ್ದು, ಈ ಸಂಬಂಧ ಕೋಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮಂಗಳೂರಿನ ಪಾವೂರು ಗ್ರಾಮದ ಹಂಝ (44), ಮೊಹಮ್ಮದ್ ಅಜರುದ್ದೀನ್ (27), ಸಜಿಪನಡು ಗ್ರಾಮದ ಅಮೀರ್ (26), ಅರ್ಫಾಜ್ (20 ) ಬಂಧಿತರು. ಪಳ್ಳಿಯಬ್ಬರನ್ನು ಹಣಕ್ಕಾಗಿ ಅಥವಾ ಬೇರೆ ಯಾವುದೋ ದ್ವೇಷದಿಂದ ಕೊಲೆ ಮಾಡಲಾಗಿದೆ ಎನ್ನಲಾಗಿದ್ದು, ಆರೋಪಿಗಳ ತನಿಖೆ ನಡೆಸಲಾಗುತ್ತಿದೆ. ಪ್ರಕರಣದಲ್ಲಿ ಭಾಗಿಯಾದ ಇನ್ನೋರ್ವ ಆರೋಪಿ ತಲೆಮರೆಸಿಕೊಂಡಿದ್ದು, ಆತನಿಗಾಗಿ ಶೋಧ ನಡೆದಿದೆ.