ಸುಳ್ಯ(ದಕ್ಷಿಣ ಕನ್ನಡ) : ಬ್ರಿಟೀಷರ ಆಡಳಿತ ವಿರುದ್ಧ ಅಲ್ಲಲ್ಲಿ ಸ್ಥಳೀಯ ಮಟ್ಟದಲ್ಲಿ ಹೋರಾಟಗಳು ನಡೆದುಕೊಂಡು ಬಂದಿರುವುದನ್ನು ನಾವು ಇತಿಹಾಸದಲ್ಲಿ ಕಾಣುತ್ತೇವೆ. ಅದೇ ರೀತಿಯ 1832 ರಲ್ಲಿ ಗುಲಾಮಗಿರಿಯಿಂದ ಮುಕ್ತವಾಗಲು ಅಮರ ಸುಳ್ಯ ಕ್ರಾಂತಿಯೂ ನಡೆದಿದೆ. ಈ ಇತಿಹಾಸ ಪಠ್ಯಗಳಲ್ಲಿ ಗೌಣವಾದರೂ ಆ ಊರಿನ ಜನರ ಬಾಯಲ್ಲಿ ಜನಜನಿತ.
ಈ 1832 ರಲ್ಲಿ ಬ್ರಿಟೀಷರ ವಿರುದ್ಧ ನಡೆದ ಸ್ವಾತಂತ್ರ್ಯ ಹೋರಾಟ ಅಥವಾ ಅಮರ ಸುಳ್ಯ ಕ್ರಾಂತಿಯ ಕುರಿತಾದ ಚರಿತ್ರೆಯನ್ನು ಉಬ್ಬು ಚಿತ್ರಣಗಳನ್ನು ಸುಳ್ಯ ತಾಲೂಕಿನ ಉಬರಡ್ಕ ಮಿತ್ತೂರು ಗ್ರಾಮದ ಅಮೈ ಮಡಿಯಾರು ಸರಕಾರಿ ಶಾಲಾ ಆವರಣ ಗೋಡೆಯ ಮೇಲೆ ಮಾಡಲಾಗಿದೆ. ಮಂಗಳೂರಿನ ಬಾವುಟಗುಡ್ಡೆಯಲ್ಲಿ ಅಮರ ಸುಳ್ಯ ದಂಗೆಯ ರುವಾರಿ ಕೆದಂಬಾಡಿ ರಾಮಯ್ಯ ಗೌಡ ಅವರ ಕಂಚಿನ ಪ್ರತಿಮೆಯ ಐತಿಹಾಸಿಕ ಲೋಕಾರ್ಪಣೆಯು ಇದೇ ತಿಂಗಳ 29ರಂದು ಅದ್ದೂರಿಯಾಗಿ ನಡೆಯಲಿದೆ.
ಅಮೈ ಮಡಿಯಾರು ಸರಕಾರಿ ಶಾಲಾ ಆವರಣ ಗೋಡೆಯಲ್ಲಿ ಜ್ಞಾನಧಾಮ ಚಾರಿಟಬಲ್ ಟ್ರಸ್ಟ್ ನೇತೃತ್ವದಲ್ಲಿ ಊರವರ ಹಾಗೂ ದಾನಿಗಳ ಸಹಕಾರದೊಂದಿಗೆ ಶಿಲ್ಪದ ಕಾರ್ಯ ನಡೆಸಲಾಗಿದೆ. ಜ್ಞಾನಧಾಮ ಚಾರಿಟಬಲ್ ವತಿಯಿಂದ ಶಾಲೆಗೆ ಸ್ವಾತಂತ್ರ್ಯ ಸೇನಾನಿ ಕೆದಂಬಾಡಿ ರಾಮಯ್ಯ ಗೌಡ ದ್ವಾರ ನಿರ್ಮಿಸಲಾಗಿದೆ.
ಅಮರ ಸುಳ್ಯ ದಂಗೆಯ ರುವಾರಿ ಕೆದಂಬಾಡಿ ರಾಮಯ್ಯ ಗೌಡ ಅವರ ಊರು ಉಬರಡ್ಕ ಮಿತ್ತೂರು ಗ್ರಾಮ. ಸಾಹಿತಿ ಕೆ.ಆರ್.ವಿದ್ಯಾಧರ ಕುಡೆಕಲ್ಲು ಅವರ ಅಮರಸುಳ್ಯ 1832 ಸಶಸ್ತ್ರ ಹೋರಾಟ ಕೃತಿಯನ್ನಾಧರಿಸಿ ಶಿಲ್ಪ ರಚಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಹಿರಿಯ ಸಾಹಿತಿ, ಚಿತ್ರಕಾರ ಎ.ಕೆ. ಹಿಮಕರ ಅವರು ರೇಖಾಚಿತ್ರವನ್ನು ಮಾಡಿಕೊಟ್ಟಿದ್ದಾರೆ. ಉಬ್ಬುಶಿಲ್ಪ ಕಲಾವಿದ ಕಾಸರಗೋಡು ಜಿಲ್ಲೆಯ ಮಹೇಶ ಬಾಯಾರು ನೇತೃತ್ವದ ತಂಡ ಸಿಮೆಂಟಿನಲ್ಲಿ ಈ ಉಬ್ಬು ಶಿಲ್ಪಗಳನ್ನು ಮಾಡಿದ್ದಾರೆ.
ಅತ್ಯಂತ ಸರಳವಾಗಿ ಈ ಘಟನೆಯ ಕುರಿತು ಬೆಳಕು ಚೆಲ್ಲುವ 10 ಶಿಲ್ಪಗಳು ರಚನೆಯಾಗಿದೆ. ಮಡಿಕೇರಿಯ ಅರಮನೆಯಿಂದ ಬ್ರಿಟೀಷರು ಕೊನೆಯ ಅರಸನನ್ನು ಹೊರಗಟ್ಟುವ ದೃಶ್ಯ, ಕೆದಂಬಾಡಿಗೆ ಪುಟ್ಟಬಸಪ್ಪನನ್ನು ಕರೆತರುವ, ಹೋರಾಟಗಾರರನ್ನು ಹಡಗಿನಲ್ಲಿ ತುಂಬಿ ವಿದೇಶಕ್ಕೆ ಗಡಿ ಪಾರು ಮಾಡುವ ಹೀಗೆ ಅಮರ ಸುಳ್ಯ ದಂಗೆಯ ಪ್ರಮುಖ ಘಟನೆಗಳು ಶಿಲ್ಪದ ರೂಪದಲ್ಲಿ ಮೂಡಿ ಬಂದಿದೆ. ಆ ಮೂಲಕ ಅಮರ ಸುಳ್ಯ ಕ್ರಾಂತಿಯ ಇತಿಹಾಸವನ್ನು ತಿಳಿಸುವ ಪ್ರಯತ್ನ ಇಲ್ಲಿ ನಡೆಸಲಾಗಿದೆ.
ಏನಿದು ಅಮರ ಸುಳ್ಯ ಕ್ರಾಂತಿ : 1837 ರಲ್ಲಿ ತುಳುನಾಡಿನ ಸಮರ ವೀರ ಕೆದಂಬಾಡಿ ರಾಮಯ್ಯ ಗೌಡರ ನೇತೃತ್ವದಲ್ಲಿ ಇಲ್ಲಿನ ರೈತರು ಬ್ರಿಟೀಷ್ ಕಂಪನಿಯ ರೈತ ವಿರೋಧಿ ದೌರ್ಜನ್ಯಗಳ ವಿರುದ್ಧ ಹೋರಾಟ ನಡೆಸಿ ಬ್ರಿಟೀಷ್ ಸೈನ್ಯವನ್ನು ಹಿಮ್ಮೆಟ್ಟಿಸಿ, ಆಗಿನ ಸೌತ್ ಕೆನರಾ ಜಿಲ್ಲೆಯ ಆಡಳಿತದ ಚುಕ್ಕಾಣಿ ಹಿಡಿದ ಈ ಹೋರಾಟವನ್ನು ಅಮರ ಸುಳ್ಯ ಕ್ರಾಂತಿ ಎನ್ನಲಾಗಿದೆ.
ಈ ಹೋರಾಟದ ಮುಖ್ಯ ರೂವಾರಿ ಜಮೀನ್ದಾರ ಕೆದಂಬಾಡಿ ರಾಮಯ್ಯ ಗೌಡರು. 1857 ರಲ್ಲಿ ನಡೆದ ಈ ಸಿಪಾಯಿ ದಂಗೆಯನ್ನು ಮೊದಲ ಸ್ವಾತಂತ್ರ್ಯ ಸಂಗ್ರಾಮವೆಂದು ಬಿಂಬಿಸಿದ್ದು, 1837 ರಲ್ಲಿ ನಡೆದ ಈ ಹೋರಾಟ ಇತಿಹಾಸದ ಅವಗಣನೆ ಒಳಗಾಗಿದೆ ಎನ್ನಲಾಗಿದೆ. 1837 ರಲ್ಲಿ ಬ್ರಿಟಿಷರ ಕ್ರೂರ ಆಡಳಿತದ ವಿರುದ್ಧ ನಾಡಿನ ಜನಸಾಮಾನ್ಯರನ್ನು ಗುಲಾಮಗಿರಿಯಿಂದ ಮುಕ್ತಗೊಳಿಸಬೇಕೆಂದು ಪಣತೊಟ್ಟ ಹೋರಾಟ ಆರಂಭ ವಾಗಿತ್ತು. ಅಂದಿನ ಸುಳ್ಯದ ಶ್ರೀಮಂತ ಜಮೀನ್ದಾರ ಕೆದಂಬಾಡಿ ರಾಮಯ್ಯ ಗೌಡರು ಪೂರ್ವ ತಯಾರಿಗಾಗಿ ಕೊಡ್ಲಿಪೇಟೆಯಿಂದ ಸಾವಿರಾರು ಖಡ್ಗಗಳನ್ನು ತರಿಸಿ ಆನೆಗಳು, ಕುದುರೆಗಳು ಮದ್ದು ಗುಂಡುಗಳನ್ನು ಜೋಡಿಸಿ ಹೋರಾಟಕ್ಕೆ ಅಣಿಯಾದರು.
ಬ್ರಿಷರಿಂದ ಮಂಗಳೂರು ವಶ : ಬ್ರಿಟಿಷರನ್ನು ಭಾರತದಿಂದ ಓಡಿಸಲೇಬೇಕೆಂದು ಪೂರ್ವ ನಿಯೋಜನೆಯಂತೆ ತನ್ನ ಸ್ವಂತ ಜಾಗವಾದ ಸುಳ್ಯದ ಉಬರಡ್ಕದ ಮಿತ್ತೂರಿನ ಮದುವೆ ಗದ್ದೆಯಲ್ಲಿ ಮಗನ ಮದುವೆ ಎಂಬ ನೆಪದಲ್ಲಿ ನಾಡಿನ ರೈತ ಮುಖಂಡರು ಹಾಗೂ ರೈತ ಸೈನಿಕರನ್ನು ಒಟ್ಟುಗೂಡಿಸಿದರು. ಅವರೆಲ್ಲರಿಗೂ ಹೋರಾಟದ ಕಿಚ್ಚನ್ನು ಹತ್ತಿಸಿ ಸುಮಾರು 2000 ಕ್ಕಿಂತ ಅಧಿಕ ಸದೃಢ ಸೈನ್ಯದೊಂದಿಗೆ ಇಲ್ಲಿನ ಬೆಳ್ಳಾರೆಯ ಬ್ರಿಟಿಷ್ ಖಜಾನೆಯನ್ನು ಧ್ವಂಸಗೊಳಿಸಿದರು. ಅದನ್ನು ಸ್ವಾಧೀನಕ್ಕೆ ಪಡೆದು ಹಂತ ಹಂತವಾಗಿ ಬೆಳ್ಳಾರೆಯಿಂದ ಪುತ್ತೂರು, ಕಾಸರಗೋಡು, ಪಾಣೆಮಂಗಳೂರು ಪ್ರದೇಶಗಳನ್ನು ಗೆದ್ದು, ಕೊನೆಯದಾಗಿ ಆಗಿನ ಬ್ರಿಟಿಷ್ ಜಿಲ್ಲಾ ಆಡಳಿತದ ಪ್ರಮುಖ ಕೇಂದ್ರವಾಗಿದ್ದ ಮಂಗಳೂರಿನ ಬಾವುಟಗುಡ್ಡೆಯನ್ನು ಸ್ವಾಧೀನ ಪಡೆದರು. ಅಲ್ಲಿ ಹಾರುತ್ತಿದ್ದ ಬ್ರಿಟಿಷ್ ಧ್ವಜವನ್ನು ಕಿತ್ತೆಸೆದು ನಮ್ಮ ನೆಲದ ಕ್ರಾಂತಿಕಾರಿ ಬಾವುಟವನ್ನು ಹಾರಿಸಿದರು.
2 ವಾರಗಳ ಆಳ್ವಿಕೆ : ಆದ್ದರಿಂದ ಆ ಪ್ರದೇಶಕ್ಕೆ ಬಾವುಟ ಗುಡ್ಡೆ ಎಂಬ ಹೆಸರು ಬಂತು ಎಂಬುದು ಐತಿಹ್ಯ. ಬ್ರಿಟಿಷ್ ದಾಖಲೆಗಳ ಪ್ರಕಾರ ಬ್ರಿಟಿಷರನ್ನು ಸಂಪೂರ್ಣವಾಗಿ ಮಟ್ಟ ಹಾಕಿದ ರೈತ ಸೈನ್ಯ ನಂತರ ಕೆದಂಬಾಡಿ ರಾಮಯ್ಯ ಗೌಡರ ನಾಯಕತ್ವದಲ್ಲಿ ಒಂದು ಯಶಸ್ವಿ ಸ್ಥಾಪಿತ ಸರಕಾರವನ್ನು ಮಂಗಳೂರಿನಲ್ಲಿ ಸ್ಥಾಪಿಸಿ 2 ವಾರಗಳ ಕಾಲ ಸರಕಾರವನ್ನು ನಡೆಸಿದರು. 2 ವಾರಗಳ ನಂತರ ಕಲ್ಲಿಕೋಟೆ, ಬೆಂಗಳೂರಿನಿಂದ ಸಾವಿರಾರು ಜನರ ಸುಸಜ್ಜಿತ ಸೈನ್ಯದೊಂದಿಗೆ ಬಂದ ಬ್ರಿಟಿಷ್ ಸೈನ್ಯ ಮತ್ತೆ ಮಂಗಳೂರನ್ನು ವಶಪಡಿಸಿಕೊಂಡು ಹೋರಾಟಗಾರರ ಬದುಕನ್ನು ಕ್ರೂರವಾಗಿ ಅಂತ್ಯಗೊಳಿಸಿತ್ತು.
ಹೋರಾಟಗಾರರ ಹತ್ಯೆ: ಈ ಹೋರಾಟಗಾರರಲ್ಲಿ ಪ್ರಮುಖರಾದ ಕೆದಂಬಾಡಿ ರಾಮಯ್ಯ ಗೌಡರು ಹಾಗೂ ಕೆಲವರನ್ನು ಮೃತದೇಹ ಸಿಗದಂತೆ ಸಿಂಗಾಪುರ ಜೈಲಿಗೆ ಹಾಕಿ ಘೋರವಾದ ಶಿಕ್ಷೆ ನೀಡಿ ಸಾಯಿಸಿರುತ್ತಾರೆ. ಇನ್ನುಳಿದ ಕೆಲವರನ್ನು ಮಂಗಳೂರಿನ ಬಿಕರ್ನಕಟ್ಟೆಯಲ್ಲಿ ಗಲ್ಲಿಗೇರಿಸಿ ಶವಗಳನ್ನು ಒಂದು ವಾರದ ಕಾಲ ನೇತಾಡುವ ಭೀಕರ ದೃಶ್ಯ ಮನಕಲಕುವಂತಿತ್ತು. ಹಾಗೆಯೇ ಸುಮಾರು 1,182 ಜನರ ಮೇಲೆ ಬ್ರಿಟಿಷರು ಕೇಸ್ ದಾಖಲಿಸಿದರು. ಈ ಎಲ್ಲಾ ದಾಖಲೆಗಳನ್ನು ಆಗಿನ ಬ್ರಿಟಿಷ್ ಜಿಲ್ಲಾಧಿಕಾರಿ ಲೆವಿನ್ ಮತ್ತು ಕಾಟನ್ ತಮ್ಮ ಅವಧಿಯ ಗಜೆಟ್ ವರದಿಯಲ್ಲಿ ದಾಖಲಿಸಿದ್ದಾರೆ.
ಪ್ರತಿಮೆ ನಿರ್ಮಾಣಕ್ಕೆ ಪಣ : ಆದ್ದರಿಂದ ಕರ್ನಾಟಕದ ದಕ್ಷಿಣ ಕನ್ನಡದ ತುಳುನಾಡಿನ ಈ ಪುಣ್ಯ ಭೂಮಿಗಾಗಿ ಹೋರಾಟ ಮಾಡಿ ತಮ್ಮ ಜೀವವನ್ನೇ ಸಮರ್ಪಣೆ ಮಾಡಿ ಹುತಾತ್ಮರಾದ ವೀರಾಧಿವೀರರುಗಳೆಲ್ಲರ ಹೆಸರನ್ನು ಸ್ಮಾರಕದ ಅಡಿಯ ಶಿಲೆಯಲ್ಲಿ ನಮೂದಿಸಬೇಕು. 1837 ರ ಸ್ವಾತಂತ್ರ್ಯ ಸಂಗ್ರಾಮದ ನೇತೃತ್ವ ವಹಿಸಿದ ಮಹಾ ದಂಡನಾಯಕ ತುಳುನಾಡಿನ ವೀರ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆಯನ್ನು ಸರಕಾರದ ಮುಖಾಂತರ ಅನುಷ್ಠಾನಗೊಳ್ಳಲು ಕೆದಂಬಾಡಿ ರಾಮಯ್ಯ ಗೌಡರ ಸ್ಮಾರಕ ಉಸ್ತುವಾರಿ ಸಮಿತಿಯ ಮುಖಾಂತರ ಅವಿರತವಾಗಿ ಪ್ರಯತ್ನವೂ ನಡೆಯಿತು.
ಸರ್ಕಾರಕ್ಕೆ ಮನವಿ : 2019 ರಲ್ಲಿ ಬೆಂಗಳೂರಿನಲ್ಲಿ ರಾಷ್ಟ್ರೀಯ ವಿಚಾರ ಸಂಕೀರ್ಣವನ್ನು ಆಯೋಜಿಸಿ 1837 ರ ಸ್ವಾತಂತ್ರ್ಯ ಹೋರಾಟದ ಆಗಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ತಿಳಿಸಿ ಪ್ರತಿಮೆ ನಿರ್ಮಾಣದ ಬಗ್ಗೆ ತಿಳಿಸಲಾಗಿತ್ತು. ಈ ಹಿನ್ನಲೆಯಲ್ಲಿ ಮಂಗಳೂರಿನ ಬಾವುಟಗುಡ್ಡೆಯಲ್ಲಿ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆಯ ಐತಿಹಾಸಿಕ ಲೋಕಾರ್ಪಣೆಯು ಇದೇ ತಿಂಗಳ 29ರಂದು ಅದ್ದೂರಿಯಾಗಿ ನಡೆಯಲಿದೆ.
ಇದನ್ನೂ ಓದಿ : ಪುತ್ತೂರು: ಅಪಾಯದ ಸ್ಥಿತಿಯಲ್ಲಿದೆ ಶತಮಾನ ಪೂರೈಸಿದ ಸರಕಾರಿ ಕಾಲೇಜು ಕಟ್ಟಡ