ಪುತ್ತೂರು: ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರ ವಹಿಸುತ್ತಿರುವ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಖಾಸಗಿ ಅದಾನಿ ಗ್ರೂಪ್‌ಗೆ ಲೀಸ್‌ಗೆ ನೀಡುವ ಮೂಲಕ ಕೇಂದ್ರ ಸರ್ಕಾರ, ದೇಶ ಮಾರಾಟ ಮಾಡಲು ಹೊರಟಿದೆ. ಇದನ್ನು ನಾವು ತೀವ್ರವಾಗಿ ಖಂಡಿಸಲಿದ್ದೇವೆ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ತಿಳಿಸಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ದೇಶದ ಎಂಟು ವಿಮಾನ ನಿಲ್ದಾಣವನ್ನು ಅದಾನಿ ಗ್ರೂಪ್‌ಗೆ ಲೀಸ್‌ಗೆ ನೀಡಲಾಗಿದೆ. 1951 ರಲ್ಲಿ ಮಂಗಳೂರಿನಲ್ಲಿ ಸ್ಥಾಪನೆಯಾದ ಇದೇ ವಿಮಾನ ನಿಲ್ದಾಣದ ಮೂಲಕ ಹಿಂದೆ ಆಡಳಿತ ನಡೆಸಿದ ಕಾಂಗ್ರೆಸ್ ಹಿರಿಯ ಮುಖಂಡರುಗಳ ಚಿಂತನೆಯ ಪರಿಣಾಮ ದೇಶದಲ್ಲಿ ದೊಡ್ಡ ಕೈಗಾರಿಗಳು ಬೆಳೆದು ಬಂದಿದೆ. ಲಾಭದಾಯಕ ಬ್ಯಾಂಕ್‌ಗಳನ್ನು ನಷ್ಟದಲ್ಲಿರುವ ಬ್ಯಾಂಕ್‌ನೊಂದಿಗೆ ವಿಲೀನಗೊಳಿಸಿ ಲಾಭದಾಯಕ, ಆರ್ಥಿಕ ಬಲಾಢ್ಯ ವ್ಯವಸ್ಥೆಯನ್ನು ಕಾರ್ಪೋರೇಟ್ ಕಂಪನಿಗೆ ಮಾರಾಟ ಮಾಡುವ ಮೂಲಕ ದೇಶದ ಆರ್ಥಿಕ ಪ್ರಗತಿ ಸಹಿತ ಪ್ರಜೆಗಳ ಅಭದ್ರತೆಗೆ ಕಾರಣವಾಗುತ್ತಿದೆ. ಇದೀಗ ಲೀಸ್‌ಗೆ ಪಡೆದುಕೊಂಡ ವಿಮಾನ ನಿಲ್ದಾಣವನ್ನು ಅದಾನಿ ಕಂಪನಿ ಜರ್ಮನಿ ಕಂಪನಿಗಳಿಗೆ ಅಂಡರ್‌ಲೀಸ್ ನೀಡುವ ಹುನ್ನಾರವನ್ನು ವ್ಯವಸ್ಥಿತವಾಗಿ ಮಾಡುತ್ತಿದೆ. ಒಟ್ಟಾರೆಯಾಗಿ ಕಾರ್ಪೋರೇಟ್ ಕಂಪನಿಗಳಿಗೆ ಪೂರಕವಾಗಿ ಕೇಂದ್ರ ಸರ್ಕಾರ ಆಡಳಿತ ನಡೆಸುತ್ತಿದೆ ಎಂದರು.
ಮುಂದಿನ ದಿನಗಳಲ್ಲಿ ಲೋಕಸಭೆ ಸದಸ್ಯತ್ವವನ್ನೇ ಕಾರ್ಪೋರೇಟ್ ಕಂಪನಿಗಳಿಗೆ ಹಣಕ್ಕಾಗಿ ಮಾರಾಟ ಮಾಡುವ ಸಂಶಯ ಕಾಡುತ್ತಿದೆ. ಈ ಕುರಿತು ಮುಂದಿನ ದಿನಗಳಲ್ಲಿ ಹೋರಾಟ ನಡೆಸದಿದ್ದರೆ ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಕರ್ನಾಟಕವನ್ನೇ ಮಾರಾಟ ಮಾಡಲು ಹೇಸುವುದಿಲ್ಲ ಎಂದು ಆರೋಪಿಸಿದರು.
ಈಗಾಗಲೇ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 400 ವರ್ಷಗಳ ಇತಿಹಾಸ ಹೊಂದಿರುವ ಪಡುಮಲೆ ಕೋಟಿ-ಚೆನ್ನಯ ವೀರ ಪುರುಷರ ಹೆಸರನ್ನು ಇಡಬೇಕೆಂದು ಕಾಂಗ್ರೆಸ್ನಿಂದ ಒತ್ತಾಯಿಸಲಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಮಾರಾಟ ಮಾಡುವ ಪ್ರಸ್ತಾಪವನ್ನು ಕೈಬಿಟ್ಟು ಮಂಗಳೂರು ವಿಮಾನ ನಿಲ್ದಾಣಕ್ಕೆ ಕೋಟಿ - ಚೆನ್ನಯರ ಹೆಸರನ್ನಿಡಲು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ತಾಪಂ ಸದಸ್ಯ ಪರಮೇಶ್ವರ ಭಂಡಾರಿ, ಕಾಂಗ್ರೆಸ್ ಮುಖಂಡ ನೇಮಾಕ್ಷ ಸುವರ್ಣ ಉಪಸ್ಥಿತರಿದ್ದರು.