ಪುತ್ತೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಮಸೂದೆ ರೈತರ ಪರವಾಗಿದೆ. ಈ ಕುರಿತು ಯಾವುದೇ ಚರ್ಚೆಗೆ ತಮ್ಮಲ್ಲಿ ಬರಬಹುದು ಎಂದು ಶಾಸಕ ಸಂಜೀವ ಮಠಂದೂರು ಸವಾಲು ಹಾಕಿದ್ದು, ಈ ಸವಾಲು ರೈತ ಹಿತಾಸಕ್ತಿಯ ಸವಾಲೋ ಅಥವಾ ಬಂಡವಾಳ ಶಾಹಿಗಳಿಂದ ನಡೆಯುವ ಬಿಜೆಪಿ ರಾಜಕೀಯ ಪಕ್ಷದ ಪ್ರತಿನಿಧಿಯಾಗಿ ಹಾಕಿದ ಸವಾಲೋ? ಎಂಬುದನ್ನು ಸ್ಪಷ್ಟಪಡಿಸಬೇಕಾಗಿದೆ ಎಂದು ರೈತ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಒತ್ತಾಯಿಸಿದ್ದಾರೆ.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ನಡೆಸಿ ಮಾತನಾಡಿದ ಅವರು, ಪುತ್ತೂರಿನಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಶಾಸಕರು ಈ ಹೇಳಿಕೆ ನೀಡಿದ್ದು, ಈಗಾಗಲೇ ದೇಶಾದ್ಯಂತ ಈ ಕುರಿತು ಚರ್ಚೆಗಳು ನಡೆಯುತ್ತಿದೆ. ಹೆಚ್ಚಿನ ರೈತರಿಗೆ ಇದರಿಂದ ಗೊಂದಲ ಇದೆ. ಹೀಗಾಗಿ ಈ ವಿಷಯ ರೈತರಿಗೆ ತಲುಪಬೇಕು ಎಂಬ ನಿಟ್ಟಿನಲ್ಲಿ ಇತ್ತೀಚೆಗೆ ನಾವು ಕೃಷಿ ಮಸೂದೆ - 2020ರ ಸಾಧಕ - ಬಾಧಕಗಳ ಕುರಿತು ಸಮಾನ ಪಕ್ಷದವರ ಜತೆಗೂಡಿ ರಾಜಕೀಯ ರಹಿತವಾಗಿ ಸಂವಾದ ನಡೆಸಿದ್ದೇವೆ ಎಂದರು.
ನಂತರ ಮಾತನಾಡಿ, ಓರ್ವ ರೈತನಾಗಿ ಈಗಾಗಲೇ ದೇಶದಲ್ಲಿ ಚರ್ಚೆಗೊಳಗಾಗಿರುವ ಈ ಮಸೂದೆ ರೈತರ ಪರವಾಗಿದೆ ಎಂಬ ಕುರಿತು ಶಾಸಕರಿಂದ ಯಾವುದೇ ಹೇಳಿಕೆಗಳಾಗಲಿ, ಸಂವಾದಗಳಾಗಲಿ ನಡೆದಿಲ್ಲ. ರೈತರ ಗೊಂದಲ ನಿವಾರಣೆ ಮಾಡುವ ಜವಾಬ್ದಾರಿಯನ್ನು ಜನಪ್ರತಿನಿಧಿಯಾದ ಶಾಸಕರು ಮಾಡಬೇಕು. ಈ ನಿಟ್ಟಿನಲ್ಲಿ ಸವಾಲು ಹಾಕುವುದನ್ನು ಬಿಟ್ಟು ಪ್ರಾಮಾಣಿಕವಾಗಿ, ರಾಜಕೀಯ ರಹಿತವಾಗಿ ಚರ್ಚೆಗೆ ನಮ್ಮೊಂದಿಗೆ ಬರುವುದಾದರೆ ರೈತ ಹಿತರಕ್ಷಣಾ ವೇದಿಕೆ ವತಿಯಿಂದ ವೇದಿಕೆ ನೀಡಲು ಸಿದ್ದರಿದ್ದೇವೆ. ಅಥವಾ ಶಾಸಕರೇ ವೇದಿಕೆಗೆ ವ್ಯವಸ್ಥೆ ಮಾಡಿದರೆ ನಾವು ಚರ್ಚೆಗೆ ಬರಲು ಸಿದ್ಧರಿದ್ದೇವೆ ಎಂದು ಸವಾಲು ಹಾಕಿದರು.