ಮಂಗಳೂರು: ನಮೀಬಿಯಾದಿಂದ ಭಾರತಕ್ಕೆ ಚೀತಾಗಳನ್ನು ವಿಮಾನದಲ್ಲಿ ಯಶಸ್ವಿಯಾಗಿ ಕರೆತರಲಾಗಿದೆ. 70 ವರ್ಷಗಳ ಬಳಿಕ 8 ವಿದೇಶಿ ಅತಿಥಿಗಳು ಭಾರತದ ನೆಲದಲ್ಲಿ ಹೆಜ್ಜೆ ಇಟ್ಟಿವೆ. ಈ ಪ್ರಾಣಿಗಳನ್ನು ಕರೆತಂದ ತಂಡದಲ್ಲಿ ಏಕೈಕ ಕನ್ನಡಿಗ ಪುತ್ತೂರಿನ ವ್ಯಕ್ತಿಯೊಬ್ಬರು ಕರ್ತವ್ಯ ನಿರ್ವಹಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಪ್ರತಿಷ್ಠಿತ ಮುಳಿಯ ಮನೆತನದ ಡಾ.ಸನತ್ ಕೃಷ್ಣ ಮುಳಿಯ ಪ್ರಾಜೆಕ್ಟ್ ಚೀತಾ ತಂಡದಲ್ಲಿ ಇದ್ದವರು. ಇವರು ಈ ತಂಡದ ಪ್ರಮುಖ ವನ್ಯಜೀವಿ ಅರಿವಳಿಕೆ ತಜ್ಞರಾಗಿದ್ದರು. ದೆಹಲಿಯ ನ್ಯಾಷನಲ್ ಝೂಲಾಜಿಕಲ್ ಪಾರ್ಕ್‌ನ ಅಸಿಸ್ಟೆಂಟ್ ವೆಟರ್ನರಿಯಲ್ಲಿ ಅಧಿಕಾರಿಯಾಗಿರುವ ಇವರು ಭಾರತದ ಮೂರು ಮಂದಿಯ ತಂಡದಲ್ಲಿದ್ದರು.
70 ವರ್ಷಗಳ ಬಳಿಕ ಚೀತಾಗಳನ್ನು ನಮೀಬಿಯಾದಿಂದ ಭಾರತಕ್ಕೆ ತರುವ ಯೋಜನೆಯಲ್ಲಿ ಸನತ್ ಕೃಷ್ಣ ಪ್ರಮುಖ ಪಾತ್ರ ವಹಿಸಿದ್ದಾರೆ. ಚೀತಾಗಳಿಗೆ ಸಣ್ಣ ಪ್ರಮಾಣದಲ್ಲಿ ಅರಿವಳಿಕೆ ನೀಡಿ ವಿಶೇಷ ವಿಮಾನದಲ್ಲಿ ಕರೆತರಲಾಗಿತ್ತು. 16 ಗಂಟೆಗಳ ವಿಮಾನದ ಪ್ರಯಾಣದಲ್ಲಿ ಶನಿವಾರ ಚೀತಾದೊಂದಿಗೆ ಈ ತಂಡ ಭಾರತ ತಲುಪಿತ್ತು. ಪ್ರಯಾಣದ ವೇಳೆ ವಿಮಾನದಲ್ಲಿ ಗಂಟೆಗೊಮ್ಮೆ ಚೀತಾಗಳ ಆರೋಗ್ಯ ತಪಾಸಣೆ ನಡೆಸಲಾಗುತ್ತಿತ್ತು.
ಇದನ್ನೂ ಓದಿ: ಆಫ್ರಿಕನ್ ಚೀತಾಗಳನ್ನು ಅಭಯಾರಣ್ಯಕ್ಕೆ ಬಿಟ್ಟ ನಮೋ.. ದೇಶದ ಚರಿತ್ರೆಯಲ್ಲಿ ಐತಿಹಾಸಿಕ ದಿನ ಎಂದ ಪಿಎಂ
ರೇಡಿಯೋ ಕಾಲರ್ ಪರಿಣತರೂ ಆಗಿರುವ ಡಾ.ಸನತ್ ಕೃಷ್ಣ ಅವರು ಆನೆಗೆ ರೇಡಿಯೋ ಕಾಲರ್ ಅಳವಡಿಕೆಯಲ್ಲಿ ಪರಿಣತ ತಜ್ಞರಾಗಿದ್ದಾರೆ. ನುರಿತ ಅರಿವಳಿಕೆ ತಜ್ಞರಾಗಿರುವ ಇವರು ಕರ್ನಾಟಕದಲ್ಲಿ ನಡೆದ ರಾಷ್ಟ್ರೀಯ ಹುಲಿ ಗಣತಿ ವೇಳೆ ಕರ್ತವ್ಯ ನಿರ್ವಹಿಸಿದ್ದಾರೆ.
ಮುಳಿಯ ಸ್ವರ್ಣೋದ್ಯಮಿ ಮನೆತನದ ಕೃಷ್ಣ ಭಟ್ ಮತ್ತು ಕಾವೇರಿ ದಂಪತಿಯ ಮೊಮ್ಮಗನಾಗಿರುವ, ಕೇಶವ ಭಟ್ ಮತ್ತು ಉಷಾ ದಂಪತಿ ಪುತ್ರನಾದ ಸನತ್ ಕೃಷ್ಣ ಅವರು ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡಿದ್ದಾರೆ. ಬಳಿಕ ಬೆಂಗಳೂರಿನ ಹೆಬ್ಬಾಳದ ಪಶುವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ವನ್ಯಜೀವಿ ವಿಭಾಗದಲ್ಲಿ ಐಎಎಸ್ಸಿ ಮತ್ತು ಎಂಪಿಎಸ್‌ಸಿ ಆಧ್ಯಯನ ಮಾಡಿದ್ದಾರೆ.
ಇದನ್ನೂ ಓದಿ: 70 ವರ್ಷಗಳ ಬಳಿಕ ಭಾರತದ ನೆಲದಲ್ಲಿ ಹೆಜ್ಜೆ ಇಟ್ಟ ಆಫ್ರಿಕನ್ ಚೀತಾ.. ಏನಿದರ ವಿಶೇಷತೆ?