ಮಂಗಳೂರು: 27 ವರ್ಷದೊಳಗಿನ ಯುವಕರ ತಂಡವೊಂದು ಸದ್ದಿಲ್ಲದೇ ನಿರ್ಮಾಣ ಮಾಡಿರುವ 'ಕನಸು ಮಾರಾಟಕ್ಕಿದೆ' ಎಂಬ ಸಿನಿಮಾ 'ಟಾಕೀಸ್' ಎನ್ನುವ ಒಟಿಟಿ ಆ್ಯಪ್ ನಲ್ಲಿ ಜ.15ಕ್ಕೆ ಪ್ರೀಮಿಯರ್ ಪ್ರದರ್ಶನಗೊಳ್ಳಲಿದೆ.
ಕಾಮಿಡಿ ಕಿಲಾಡಿ ಖ್ಯಾತಿಯ ಅನೀಶ್ ಪೂಜಾರಿ ಸಿನಿಮಾಕ್ಕೆ ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಸಿನಿಮಾಕ್ಕೆ ಯುವ ನಿರ್ದೇಶಕ ಸ್ಮಿತೇಶ್ ಎಸ್.ಬಾರ್ಯ ಮೊದಲ ಬಾರಿಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ನಾಯಕ ಪ್ರಜ್ಞೇಶ್ ಶೆಟ್ಟಿ, ನಾಯಕಿಯರಾದ ಸ್ವಸ್ತಿಕಾ ಪೂಜಾರಿ, ನವ್ಯಾ ಪೂಜಾರಿ, ಛಾಯಾಗ್ರಾಹಕ ಸಂತೋಷ್ ಆಚಾರ್ಯ ಗುಂಪಲಾಜೆ, ಚಿತ್ರಕಥೆ, ಸಂಭಾಷಣೆ ಬರೆದಿರುವ ಅನೀಶ್ ಪೂಜಾರಿ, ಕಥೆ ಬರೆದಿರುವ ನವೀನ್ ಪೂಜಾರಿ ಹಾಗೂ ನಟ - ನಟಿಯರಲ್ಲೂ ಹೆಚ್ಚಿನವರು ಕರಾವಳಿಯವರಾಗಿದ್ದಾರೆ.
ಸಿನಿಮಾಕ್ಕೆ ಮಾನಸ ಹೊಳ್ಳ ಸಂಗೀತ ನಿರ್ದೇಶನ ಮಾಡಿದ್ದು, ರಾಜೇಶ್ ಕೃಷ್ಣನ್, ವಿಜಯ್ ಪ್ರಕಾಶ್, ವಾಣಿ ಹರಿಕೃಷ್ಣ, ಸರಿಗಮಪ ಖ್ಯಾತಿಯ ಶಶಾಂಕ್ ಶೇಷಗಿರಿ, ಶ್ರೀಹರ್ಷ, ವರುಣ್ ರಾಮಚಂದ್ರ ಮತ್ತಿತರರು ಧ್ವನಿ ನೀಡಿದ್ದಾರೆ.
'ಕನಸು ಮಾರಾಟಕ್ಕಿದೆ' ಸಿನಿಮಾ 'ಟಾಕೀಸ್' ಒಟಿಟಿ ಆ್ಯಪ್ ನಲ್ಲಿ 7 ದಿನಗಳ ಕಾಲ ಪ್ರದರ್ಶನಗೊಳ್ಳಲಿದೆ. ಸಿನಿಮಾ ಟಿಕೆಟ್ ಗೆ 150 ರೂ. ದರ ನಿಗದಿಪಡಿಸಲಾಗಿದ್ದು, ಟಿಕೆಟ್ ಪಡೆದವರು ಎರಡು ಬಾರಿ ಸಿನಿಮಾ ನೋಡಲು ಅವಕಾಶ ನೀಡಲಾಗಿದೆ. ಸಿನಿಮಾ ಟಿಕೇಟನ್ನು www.kanasumaratakkide.com ವೆಬ್ ಸೈಟ್ ನಿಂದ ಸಿನಿಮಾ ಟಿಕೆಟ್ ಖರೀದಿಸಬಹುದು. ಟಿಕೆಟ್ ನ ಹಣದ ಒಂದು ಭಾಗವನ್ನು ಅನಾಥ ಆಶ್ರಮಕ್ಕೆ ನೀಡಲು ಸಿನಿಮಾ ತಂಡ ನಿರ್ಧರಿಸಿದೆ.