ಬಂಟ್ವಾಳ(ದಕ್ಷಿಣ ಕನ್ನಡ): ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್ಎಸ್ಎಸ್)ಅನ್ನು ನಪುಂಸಕ ಸಂಘಟನೆ ಎಂಬ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟೀಕೆಗೆ ಆರ್ಎಸ್ಎಸ್ ಹಿರಿಯ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ ಭಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ದೇಶವನ್ನು ಪೂಜೆ ಮಾಡುವವರು ನಪುಂಸಕರಾ? ಎಂದು ಸಿದ್ದರಾಮಯ್ಯಗೆ ಪ್ರಶ್ನಿಸಿದ್ದಾರೆ.
ಕಲ್ಲಡ್ಕದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್ಯ- ದ್ರಾವಿಡ ಎನ್ನುವುದು ಇಂಗ್ಲಿಷರು ಮಾಡಿದ ಸಂಸ್ಕೃತಿ. ಹೇಳಿ ಕೇಳಿ ಆ ಇಟಲಿಯಲ್ಲಿದ್ದ ಮಹಿಳೆಯ ಪಾದಪೂಜೆ ಮಾಡುತ್ತಾರಲ್ವಾ, ಅವರನ್ನು ಪೂಜೆ ಮಾಡುವವರು ನಪುಂಸಕರಾ? ದೇಶವನ್ನು ಪೂಜೆ ಮಾಡುವವರು ನಪುಂಸಕರಾ? ಎಂದು ಪ್ರಶ್ನಿಸಿದರು.
ಹಿಂದೆ ಮುಸ್ಲಿಮರೇ ಇದ್ದ ವಿಮಾನ ದುರಂತ ಸಂಭವಿಸಿದ ಸಂದರ್ಭ ರಕ್ಷಣಾ ಕಾರ್ಯಕ್ಕೆ ತಕ್ಷಣ ಧಾವಿಸಿದ ಆರ್ಎಸ್ಎಸ್ ಕಾರ್ಯಕರ್ತರನ್ನು ಅಂದಿನ ವಿಮಾನಯಾನ ಸಚಿವ ಸಿ. ಎಂ ಇಬ್ರಾಹಿಂ ಅವರೇ ಪ್ರಶಂಸಿಸಿದ್ದರು. ದಿನನಿತ್ಯ ಭಾರತ ಮಾತಾ ಕಿ ಜೈ ಎನ್ನುವವರು ಆರ್ಎಸ್ಎಸ್ನವರು. ಇಟಲಿಯಿಂದ ಬಂದವರಿಗೆ ಜೈಕಾರ ಹಾಕುವವರು ಅವರು. ದೇಶದ ವಿಭಜನೆ ಮಾಡಿದ್ದು ಯಾರು ಹೇಳಿ? ಆರ್ಎಸ್ಎಸ್ಸಾ?. ವಿಶ್ವ ಹಿಂದೂ ಪರಿಷತ್ತಾ?. ಇದೇ ನೆಹರೂ, ಗಾಂಧಿ, ಮುಸ್ಲಿಂ ಲೀಗ್ ಮಾಡಿದ್ದಲ್ವಾ? ಎಂದು ಪ್ರಶ್ನಿಸಿದ ಡಾ. ಭಟ್, ಹೊರಗಿನಿಂದಷ್ಟೇ ಅಲ್ಲ, ಒಳಗಿನಿಂದಲೂ ಪಾಕಿಸ್ತಾನ ಜಿಂದಾಬಾದ್ ಎನ್ನುವುದಕ್ಕೆ ಕಾರಣ ಕಾಂಗ್ರೆಸ್ ಅಲ್ವಾ? ಎಂದು ಪ್ರಶ್ನಿಸಿದರು.
ಪಠ್ಯಪುಸ್ತಕ ಕುರಿತು ವಿವಾದ ಮಾಡುವುದು ಸರಿಯಲ್ಲ.. ಪಠ್ಯಪುಸ್ತಕ ಬರಲಿ, ಆವಾಗ ಅದರಲ್ಲೇನಿದೆ ಅನ್ನೋದು ಗೊತ್ತಾಗುತ್ತದೆ. ಅದಕ್ಕೂ ಮೊದಲೇ ಪೂರ್ವಗ್ರಹಪೀಡಿತವಾಗಿ ಪಠ್ಯಪುಸ್ತಕ ಕುರಿತು ವಿವಾದ ಮಾಡುವುದು ಸರಿಯಲ್ಲ ಎಂದರು.
ತಲೆತಲಾಂತರದಿಂದ ಹಿಂದೂಗಳು ನಾವು. ಹಿಂದೂ ಧರ್ಮ ಎಲ್ಲರನ್ನೂ ಒಟ್ಟು ಸೇರಿಸಿ, ಎಲ್ಲರೊಂದಿಗೆ ಜೊತೆಯಲ್ಲಿ ಸಾಗುವ ಧರ್ಮ. ಈ ಧರ್ಮದ ಬಗ್ಗೆ ಹೇಳಿದರೂ ತಪ್ಪು ಎನ್ನಲಾಗುತ್ತಿದೆ. ಕ್ರಿಶ್ಚಿಯನ್ನರ ಬಗ್ಗೆ ಔರಂಗಜೇಬರ ಬಗ್ಗೆ ಹೇಳಿದರೆ ತಪ್ಪಲ್ಲ. ಹೆಡಗೇವಾರ್ ಬರೆದದ್ದನ್ನು ಹೇಳಿದರೆ ತಪ್ಪು ಹೇಗಾಗುತ್ತದೆ ಎಂದು ಕೇಳಿದ ಡಾ. ಭಟ್ ಅವರು ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಉತ್ತಮ ಕಾರ್ಯ ಮಾಡುತ್ತಿದೆ ಎಂದು ಶ್ಲಾಘಿಸಿದರು.
ಏಸುಕ್ರಿಸ್ತ, ಮಹಮ್ಮದ್ ಪೈಗಂಬರ್ ಪಠ್ಯ ಕೊಡಿ. ಆದರೆ, ರಾಮನ ಕುರಿತು ಕೊಡಬೇಕಲ್ವಾ?. ನೀವು ಕ್ರಿಶ್ಚಿಯಾನಿಟಿ ಬಗ್ಗೆ ಹೇಳಬಹುದು. ಹಿಂದೂಗಳ ಬಗ್ಗೆ ಹೇಳಬಹುದಲ್ವಾ?. ನೆಹರೂ, ಗಾಂಧೀಜಿ, ಇಂದಿರಾಗಾಂಧಿ ಬಗ್ಗೆ ಓದಿದವರೆಲ್ಲರೂ ಕಾಂಗ್ರೆಸ್ನವರಾಗ್ತಾರಾ?. ವ್ಯಕ್ತಿ ಪೂಜೆ ಮಾಡಬೇಡಿ ಎಂದು ಹೆಡಗೇವಾರ್ ಹೇಳಿದ್ದನ್ನು ಓದಿದರೆ ಆರ್ಎಸ್ಎಸ್ ನವರಾಗ್ತಾರಾ? ಸುಮ್ಮನೆ ಟೀಕೆ ಮಾಡಬಾರದು ಎಂದು ಹೇಳಿದರು.
ಓದಿ: ಹಿಜಾಬ್ ಧರಿಸಿ ನೃತ್ಯ ಮಾಡಿದ ಯುವಕರು: ಮುಸ್ಲಿಂ ಮುಖಂಡರ ಆಕ್ಷೇಪ, ಖಂಡನೆ