ಕಡಬ: ಕಡಬ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೇರಿಸಲು ಅನುಮೋದನೆ ಸಿಕ್ಕಿದ್ದು, ಈ ಬಗ್ಗೆ ಸಚಿವ ಮಾಧುಸ್ವಾಮಿ ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ತಾಲೂಕು ಕೇಂದ್ರವಾಗಿ ವರ್ಷ ಪೂರೈಸುವ ಮುನ್ನವೇ ಕಡಬ ಗ್ರಾಮ ಪಂಚಾಯತ್ ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೇರುವ ಮುನ್ಸೂಚನೆ ಸಿಕ್ಕಿದೆ. ಕಡಬ ಗ್ರಾಮ ಪಂಚಾಯಿತಿಯು ಪಟ್ಟಣ ಪಂಚಾಯಿತಿ ಆಗಿ ಬದಲಾದರೆ ಅಭಿವೃದ್ಧಿ ಕಾಮಗಾರಿಗಳು ಹಾಗೂ ಮೂಲ ಸೌಕರ್ಯಗಳನ್ನು ಅನುಷ್ಠಾನಗೊಳಿಸಲು ಹೆಚ್ಚಿನ ಅನುದಾನಗಳು ಲಭಿಸಲಿದೆ. ಈ ಬೆಳವಣಿಗೆ ಊರಿನವರಿಗೆ ಖುಷಿ ನೀಡಿದೆ.
ವಿನಯ ಕುಮಾರ್ ಸೊರಕೆ ನಗರಾಭಿವೃದ್ಧಿ ಸಚಿವರಾಗಿದ್ದಾಗ ಕಡಬ ಗ್ರಾಮ ಪಂಚಾಯಿತಿಯನ್ನು ಪ.ಪಂ. ಆಗಿ ಮೇಲ್ದರ್ಜೆಗೇರಿಸಬೇಕೆಂದು ಸ್ಥಳೀಯ ಕಾಂಗ್ರೆಸ್ ಮುಖಂಡರ ನಿಯೋಗ ಆಗಿನ ಸಚಿವರಲ್ಲಿ ಮನವಿ ಸಲ್ಲಿಸಿತ್ತು. ಇತ್ತೀಚೆಗೆ ಬಿಜೆಪಿ ಮುಖಂಡರ ನಿಯೋಗವು ಸಚಿವರನ್ನು ಭೇಟಿ ಮಾಡಿ ಅನುಮೋದನೆ ನೀಡುವಂತೆ ಮನವಿ ಸಲ್ಲಿಸಿತ್ತು ಎನ್ನಲಾಗಿದೆ.
ಕಡಬ ಗ್ರಾಮ ಪಂಚಾಯತಿ, ಪಟ್ಟಣ ಪಂಚಾಯಿತಿ ಆಗಿ ಮೇಲ್ದರ್ಜೆಗೇರಿಸಲು ಪೂರಕವಾಗಿರುವ ಅಂಶಗಳನ್ನು ದಾಖಲಿಸಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಿಗೆ ಪ್ರಸ್ತಾವನೆ ಕಳುಹಿಸಿಕೊಟ್ಟಿತ್ತು. ಇದೇ ವೇಳೆ ಪ್ರಸ್ತುತ ಇರುವ ಮೂಲಭೂತ ಸೌಕರ್ಯಗಳ ಬಗ್ಗೆ ವಿವರವಾದ ವರದಿ ನೀಡಿತ್ತು.