ಮಂಗಳೂರು: ವರ್ಷಗಳ ಹಿಂದೆ ಚಿತ್ರ ಪ್ರದರ್ಶನವನ್ನು ನಿಲ್ಲಿಸಿದ್ದ ಮಂಗಳೂರಿನ ಜ್ಯೋತಿ ಚಿತ್ರಮಂದಿರದ ಕಟ್ಟಡವನ್ನು ನೆಲಸಮಗೊಳಿಸಲಾಗಿದೆ.
ಮಂಗಳೂರಿನ ಪ್ರಮುಖ ಸರ್ಕಲ್ಗಳಲ್ಲಿ ಜ್ಯೋತಿ ಸರ್ಕಲ್ ಸಹ ಒಂದು. ಈ ಸರ್ಕಲ್ಗೆ ಜ್ಯೋತಿ ಎಂಬ ಹೆಸರು ಬರಲು ಕಾರಣವಾದದ್ದು, ಈ ಚಿತ್ರಮಂದಿರ. ಈ ಕಾರಣದಿಂದಲೇ ಸರ್ಕಾರಿ ದಾಖಲೆಗಳಲ್ಲಿ ಇರುವ ಡಾ.ಬಿ.ಆರ್. ಅಂಬೇಡ್ಕರ್ ವೃತ್ತವು ಜ್ಯೋತಿ ಸರ್ಕಲ್ ಅಂತಲೇ ಪ್ರಸಿದ್ಧವಾಗಿದೆ. ಇನ್ಮುಂದೆ ಈ ಜ್ಯೋತಿ ಚಿತ್ರಮಂದಿರ ಇತಿಹಾಸದ ಪುಟಗಳಲ್ಲಿ ಮಾತ್ರ ಉಳಿಯಲಿದೆ.
ಇದನ್ನೂ ಓದಿ: ರಾಷ್ಟ್ರೀಯ ಹೆದ್ದಾರಿ ಅಗಲೀಕರಣದಿಂದ 800 ವರ್ಷಗಳ ಪುರಾತನ ಮಠ ತೆರವು : ಮೇಲ್ಸೇತುವೆ ನಿರ್ಮಾಣಕ್ಕೆ ಮನವಿ
ಜ್ಯೋತಿ ಚಿತ್ರಮಂದಿರ ಕಳೆದ ಐದು ದಶಕಗಳಿಂದ ಚಿತ್ರ ಪ್ರೇಮಿಗಳಿಗೆ ನೆಚ್ಚಿನ ಟಾಕೀಸ್ ಆಗಿತ್ತು. ಕನ್ನಡ, ತುಳು ಸಿನಿಮಾಗಳು ಇಲ್ಲಿ ಪ್ರದರ್ಶನಗೊಳ್ಳುತ್ತಿದ್ದವು. ತುಳು ಸಿನಿಮಾ ಪ್ರದರ್ಶನಕ್ಕಂತೂ ಈ ಚಿತ್ರ ಮಂದಿರವನ್ನೆ ಚಿತ್ರತಂಡ ಆಯ್ಕೆ ಮಾಡುತ್ತಿತ್ತು. ಆದರೆ ಕೊರೊನಾ ಆರಂಭದ ಬಳಿಕ ಈ ಚಿತ್ರಮಂದಿರದಲ್ಲಿ ಚಿತ್ರಪ್ರದರ್ಶನವನ್ನು ನಿಲ್ಲಿಸಲಾಗಿತ್ತು.
ಈ ಸಿನಿಮಾಮಂದಿರವನ್ನು ಕೆಡವಿ ಮಲ್ಟಿಪ್ಲೆಕ್ಸ್ ನಿರ್ಮಾಣ ಮಾಡಲು ಹಲವು ವರ್ಷಗಳ ಹಿಂದೆ ನಿರ್ಧರಿಸಲಾಗಿತ್ತು. ಮುಂಬೈನ ಬಿಲ್ಡರ್ರೊಬ್ಬರ ಸಹಭಾಗಿತ್ವದಲ್ಲಿ ಮಲ್ಟಿಪ್ಲೆಕ್ಸ್ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ. ಅದಕ್ಕಾಗಿ ಚಿತ್ರಮಂದಿರದ ಕಟ್ಟಡವನ್ನು ಕೆಡವಲಾಗುತ್ತಿದೆ. ಕಳೆದ ಐದು ದಶಕಗಳಿಂದ ಚಿತ್ರಪ್ರೇಮಿಗಳ ನೆಚ್ಚಿನ ತಾಣವಾಗಿದ್ದ ಜ್ಯೋತಿ ಚಿತ್ರಮಂದಿರ ಇನ್ನು ನೆನಪು ಮಾತ್ರ..
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ