ಮಂಗಳೂರು: ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಕ್ರಾಂತಿಕಾರಕ ಸುಧಾರಣೆ ಇಂದಿಗೂ ಪ್ರಸ್ತುತ. ಆದರೆ ಅವುಗಳ ಉಪಯೋಗ ಪಡೆದ ಎಲ್ಲರೂ ಅವರನ್ನು ಮರೆತಿದ್ದಾರೆ ಎಂದು ಮಾಜಿ ಶಾಸಕ ಜೆ.ಆರ್.ಲೋಬೊ ವಿಷಾದ ವ್ಯಕ್ತಪಡಿಸಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಇಂದಿರಾ ಗಾಂಧಿಯವರ ಜನ್ಮದಿನಾಚರಣೆ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು. ಇಂದಿಗೆ ಲಕ್ಷಾಂತರ ಜನರು ಭೂಮಿಯ ಒಡೆಯರಾಗಿದ್ದರೆ, ಆ ದಿನಗಳಲ್ಲಿ ಗ್ರಾಮ ಮಟ್ಟದಲ್ಲಿ ನ್ಯಾಯಾಲಯ ಸ್ಥಾಪನೆ ಮಾಡಿ ಮನೆ ಮನೆಗಳಿಗೆ ನ್ಯಾಯ ಕೊಡಿಸುವ ಅಭೂತಪೂರ್ವ ಕ್ರಾಂತಿಯನ್ನು ಇಂದಿರಾ ಗಾಂಧಿಯವರು ಮಾಡಿದ್ದಾರೆ. ಬಹುಶಃ ಇಂತಹ ಕಾರ್ಯ ಜಗತ್ತಿನಲ್ಲಿ ಎಲ್ಲಿಯೂ ನಡೆದಿರಲಿಕ್ಕಿಲ್ಲ ಎಂದು ಹೇಳಿದರು.
ಇಂದಿರಾ ಗಾಂಧಿವರ ಭೂ ಸುಧಾರಣಾ ಯೋಜನೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯೊಂದರಲ್ಲಿಯೇ ಸುಮಾರು 105ಕ್ಕಿಂತಲೂ ಅಧಿಕ ಭೂ ಮಂಡಳಿಗಳು ಕೆಲಸ ಮಾಡಿವೆ. ಒಂದೊಂದು ಹೋಬಳಿ, ಗ್ರಾ.ಪಂ.ಗಳಲ್ಲಿ ಒಂದೊಂದು ನ್ಯಾಯ ಮಂಡಳಿಗಳು ಇದ್ದವು. ಈ ಮೂಲಕ ಸಾಮಾಜಿಕ ಕ್ರಾಂತಿಯನ್ನು ಮಾಡಿ ಬಡವರ ಏಳಿಗೆಗೆ ಭೂಮಿಯನ್ನು ನೀಡಿ ಮಾಡಿರುವ ನ್ಯಾಯ ಜಗತ್ತಿನಲ್ಲಿಯೇ ಅತೀ ವಿಶೇಷವಾದದ್ದು. ಈ ವಿಚಾರವನ್ನು ಮುಂದಿನ ಪೀಳಿಗೆಗೆ ಹೇಳುವಂತಹ ಅತೀ ದೊಡ್ಡ ಜವಾಬ್ದಾರಿ ಕಾಂಗ್ರೆಸಿಗರ ಮೇಲಿದೆ ಎಂದರು.
ಆದರೆ ಇಂದು ಭೂ ಸುಧಾರಣಾ ಕಾನೂನಿನ ಮೂಲಕ ಜಮೀನು ಪಡೆದವರು ಇಂದಿರಾ ಗಾಂಧಿಯವರ ಕಾರ್ಯ, ಮೌಲ್ಯವನ್ನು ಮರೆತಿದ್ದಾರೆ. ಆದ್ದರಿಂದ ಈ ಜಯಂತಿಗಳ ಮೂಲಕವಾದರೂ ನಾವು ಆತ್ಮಾವಲೋಕನ ಮಾಡಬೇಕಿದೆ. ಇಂದಿರಾ ಗಾಂಧಿ ಮಾತ್ರವಲ್ಲ ಕಾಂಗ್ರೆಸ್ನ ಹಲವಾರು ಹಿರಿಯ ನಾಯಕರ ಇಂತಹ ಕಾರ್ಯಕ್ರಮವಗಳನ್ನು ಗ್ರಾಮ, ಪಂಚಾಯತ್, ವಾರ್ಡ್ ಮಟ್ಟದಲ್ಲಿ ಆಚರಣೆ ಮಾಡಿದ್ದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷವನ್ನು ಕಟ್ಟಲು ಸಾಧ್ಯ. ಈ ಬಗ್ಗೆ ಚಿಂತನೆ ನಡೆಸುವ ಅಗತ್ಯವಿದೆ ಎಂದು ಕೆಪಿಸಿಸಿ ಅಧ್ಯಕ್ಷರು ಹಾಗೂ ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಲ್ಲಿ ವಿನಂತಿಸಿದರು.