ಸುಳ್ಯ: ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದೊಂದಿಗೆ ಡಿ. 22ರಂದು ಸುಳ್ಯ ತಾಲೂಕಿನ ಮಡಪ್ಪಾಡಿಯಲ್ಲಿ ನಡೆಯಲಿರುವ ಪತ್ರಕರ್ತರ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಎಲ್ಲಾ ಇಲಾಖೆಗಳ ಅಧಿಕಾರಿಗಳು ಅಯಾ ಇಲಾಖೆಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿಯೊಂದಿಗೆ ಬರಬೇಕು ಎಂದು ಎಸಿ ಡಾ. ಯತೀಶ್ ಉಲ್ಲಾಳ್ ತಿಳಿಸಿದ್ದಾರೆ.
ಪತ್ರಕರ್ತರ ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸುಳ್ಯ ತಾಲೂಕು ಪಂಚಾಯತ್ ಸಭಾ ಭವನದಲ್ಲಿ ನಡೆದ ತಾಲೂಕು ಮಟ್ಟದ ವಿವಿಧ ಇಲಾಖಾಧಿಕಾರಿಗಳ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಜನರು ಮುಂದಿರಿಸುವ ಎಲ್ಲಾ ಸಮಸ್ಯೆಗಳಿಗೆ ಮತ್ತು ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಬೇಕು ಎಂದು ಪುತ್ತೂರು ಉಪ ಆಯುಕ್ತ ಡಾ. ಯತೀಶ್ ಉಳ್ಳಾಲ್ ಎಲ್ಲಾ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಇದು ಇಲಾಖೆಗಳದ್ದೇ ಕಾರ್ಯಕ್ರಮ ಎಂಬ ಭಾವನೆ ನಿಮಗೆ ಇರಬೇಕು. ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದು ನಮಗೂ ಹೆಮ್ಮೆಯ ವಿಷಯ. ಜನರ ಮತ್ತು ಆಡಳಿತ ವ್ಯವಸ್ಥೆಯ ಮಧ್ಯೆ ಕೊಂಡಿಯಾಗಿ ಪತ್ರಕರ್ತರ ಸಂಘ ಈ ಕಾರ್ಯಕ್ರಮ ಆಯೋಜಿಸಿದೆ. ಆದುದರಿಂದ ಕಾರ್ಯಕ್ರಮ ಯಶಸ್ವಿಗೊಳಿಸಲು ಎಲ್ಲ ಇಲಾಖೆಗಳ ಅಧಿಕಾರಿಗಳು ಶ್ರಮ ವಹಿಸಬೇಕು ಎಂದು ಅವರು ಹೇಳಿದರು. ಇಲಾಖೆಯ ಕಾರ್ಯಕ್ರಮಗಳನ್ನು ಜನರೆಡೆಗೆ ತಲುಪಿಸಲು ಇದೊಂದು ಉತ್ತಮ ವೇದಿಕೆ. ಹಾಗಾಗಿ ಎಲ್ಲಾ ಇಲಾಖೆಗಳು ಜನರಿಗೆ ಮಾಹಿತಿ ನೀಡುವಂತೆ ಎ.ಸಿ ಅವರು ಸೂಚನೆ ನೀಡಿದರು.