ಮಂಗಳೂರು: ಕುಡಿಯುವ ನೀರು ವ್ಯರ್ಥವಾಗುವುದನ್ನು ತಡೆಯಲು ಎಷ್ಟೇ ಜಾಗೃತಿ ಮೂಡಿಸಿದರೂ ಪ್ರಯೋಜನಕ್ಕೆ ಬಾರದಂತಾಗಿದೆ. ಗೃಹ ಬಳಕೆಯ ನಡುವೆ ಪೋಲಾಗುವ ನೀರಿನ ಜೊತೆಗೆ ಪಾಲಿಕೆಯಿಂದ ಮನೆಗಳಿಗೆ ನೀರು ಸರಬರಾಜು ಆಗುವ ಸಂದರ್ಭದಲ್ಲಿಯೂ ನೀರು ಪೋಲು ಆಗುತ್ತಿದೆ. ಅಗಾಧ ಪ್ರಮಾಣದಲ್ಲಿ ನೀರು ಪೋಲಾಗುವುದನ್ನು ತಡೆಯಲು ಮಂಗಳೂರು ಪಾಲಿಕೆಯಿಂದ ಜಲಸಿರಿ ಯೋಜನೆ ಕಾರ್ಯ ಆರಂಭವಾಗಿದೆ.
ಮಂಗಳೂರು ಮಹಾನಗರದಲ್ಲಿ ಕುಡಿಯುವ ನೀರಿನ ಕೊರತೆ ಇತ್ತೀಚಿನ ವರ್ಷಗಳಲ್ಲಿ ಕಾಡಿಲ್ಲ. ಕುಡಿಯುವ ನೀರು ಪೂರೈಸುವ ತುಂಬೆ ವೆಂಟೆಂಡ್ ಡ್ಯಾಮ್ ಎತ್ತರಿಸಿದ ಬಳಿಕ ಮಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಂಡಿಲ್ಲ. ಕುಡಿಯುವ ನೀರಿಗೆ ಕೊರತೆ ಇರದಿದ್ದರೂ ನೀರು ಪೋಲಾಗುತ್ತಿರುವುದು ಮಾತ್ರ ಸಾಮಾನ್ಯವಾಗಿ ಹೆಚ್ಚಿದೆ.
ನೀರು ಪೋಲಾಗುವುದನ್ನು ತಡೆಯುವ ಮತ್ತು ಜನರಿಗೆ 24*7 ನೀರು ಒದಗಿಸುವ ದೃಷ್ಟಿಯಿಂದ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಜಲಸಿರಿ ಯೋಜನೆಯಡಿ ಪ್ಯಾರಿಸ್ನ ಸುಯೇಜ್ ಪ್ರಾಜೆಕ್ಟ್ (ಪ್ರೈ) ಲಿಮಿಟೆಡ್ ಸಂಸ್ಥೆಗೆ ಗುತ್ತಿಗೆ ನೀಡಲಾಗಿದೆ. ಇವರು 30 ವರ್ಷ ಕುಡಿಯುವ ನೀರು ಪೂರೈಸುವ ಗುತ್ತಿಗೆ ಪಡೆದುಕೊಂಡಿದ್ದು ಇದಕ್ಕಾಗಿ ಹೊಸ ಪೈಪ್ಲೈನ್ ಕೂಡ ಹಾಕಲಿದ್ದಾರೆ. ಈ ಪೈಪ್ಲೈನ್ ಮೂಲಕ ಅನಧಿಕೃತ ಟ್ಯಾಪಿಂಗ್, ನೀರು ಪೋಲಾಗುವುದನ್ನು ತಡೆಯಲು ತಂತ್ರಜ್ಞಾನ ಬಳಸಲಿದ್ದಾರೆ.
ಈ ಯೋಜನೆ ಬಗ್ಗೆ ಈಟಿವಿ ಭಾರತದ ಜೊತೆಗೆ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್ ಅವರು, ಒಂದು ವರ್ಷದ ಹಿಂದೆ ಜಲಸಿರಿ ಯೋಜನೆಯಡಿ ಗುತ್ತಿಗೆ ಪಡೆದುಕೊಂಡಿರುವ ಸರ್ವೇ ಕಾರ್ಯ ಕೊರೊನಾ ಕಾರಣದಿಂದ ವಿಳಂಬವಾಗಿದ್ದು ಈಗ ಮುಗಿದಿದೆ. ಪೈಪ್ಲೈನ್ ಅಳವಡಿಸಲು ಗುತ್ತಿಗೆದಾರರು ಸಿದ್ಧತೆ ನಡೆಸುತ್ತಿದ್ದಾರೆ. ಈ ಕಾರ್ಯ ಪೂರ್ಣವಾದರೆ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕುಡಿಯುವ ನೀರು ಪೋಲಾಗುವುದನ್ನು ತಡೆಯಲು ಸಾಧ್ಯವಾಗಲಿದೆ ಎಂದು ತಿಳಿಸಿದ್ದಾರೆ.