ಮಂಗಳೂರು: ಜೈನ ಸಮುದಾಯವರ ಅಭಿವೃದ್ದಿಗಾಗಿ ರಾಜ್ಯದಲ್ಲಿ ಜೈನ ಅಭಿವೃದ್ಧಿ ನಿಗಮ ಸ್ಥಾಪನೆಯಾಗಲಿ ಎಂದು ಮಾಜಿ ಸಚಿವ ಅಭಯಚಂದ್ರ ಜೈನ್ ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಜೈನರ ಜನಸಂಖ್ಯೆ ಕಡಿಮೆಯಿದೆ. ಭೂಸುಧಾರಣೆ ಕಾಯ್ದೆಯಿಂದ ಜೈನರು ಅತೀ ಹೆಚ್ಚು ಭೂಮಿ ಕಳೆದುಕೊಂಡಿದ್ದಾರೆ. ಜೈನ ಸಮುದಾಯದವರ ಅಭಿವೃದ್ದಿಗೆ ನಿಗಮವಾಗಬೇಕಾಗಿದೆ. ಬಹಳ ವರ್ಷಗಳಿಂದ ನಿಗಮದ ನಿರೀಕ್ಷೆ ಇದ್ದರೂ, ಅಹಿಂಸಾವಾದಿಗಳಾಗಿರುವುದರಿಂದ ಎಲ್ಲವನ್ನೂ ಸಹಿಸಿಕೊಂಡಿದ್ದೇವೆ ಎಂದರು.
ಜೈನರ ಜನಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಸಮುದಾಯದ ಅಭಿವೃದ್ದಿಗಾಗಿ ಮುಖ್ಯಮಂತ್ರಿಗಳು ನಿಗಮ ಸ್ಥಾಪಿಸಬೇಕು ಎಂದರು. ಕೃಷ್ಣಾ ನದಿ ತೀರದಲ್ಲಿರುವ ಜೈನರು ನೆರೆಯಿಂದ ಬಾಧಿತರಾಗಿದ್ದರೂ ಅವರಿಗೆ ಪರಿಹಾರ ಸಿಕ್ಕಿಲ್ಲ. ಬೆಳಗಾವಿ, ಬೀದರ್, ಗುಲ್ಬರ್ಗ, ಹುಬ್ಬಳ್ಳಿ, ವಿಜಯಪುರದಲ್ಲಿ ಹೆಚ್ಚಿನ ಜೈನ ಸಮುದಾಯದವರು ಕೂಲಿ ಕೆಲಸ ಮಾಡುತ್ತಿದ್ದು, ಅವರು ಮೂಲ ಆದಾಯಕ್ಕಿಂತಲೂ ಕಡಿಮೆ ಆದಾಯ ಹೊಂದಿದ್ದಾರೆ. ಹೀಗಾಗಿ ನಮ್ಮ ಬೇಡಿಕೆ ನ್ಯಾಯಯುತವಾಗಿದೆ ಎಂದು ಅವರು ತಿಳಿಸಿದರು.