ಮಂಗಳೂರು : ಕೇಂದ್ರದ ಉಡಾನ್ ಯೋಜನೆಯ ಮೂಲಕ ಬೈಂದೂರು, ಕಾರವಾರದಲ್ಲಿ ನಾಗರಿಕ ವಿಮಾನ ನಿಲ್ದಾಣಗಳ ನಿರ್ಮಾಣಕ್ಕೆ ಚಿಂತನೆ ನಡೆಸಲಾಗಿದೆ ಎಂದು ಮಧ್ಯಮ ಮತ್ತು ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.
ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ (ಫಿಕ್ಕಿ) ವತಿಯಿಂದ ನಗರದ ಟಿಎಂಎ ಪೈ ಸಭಾಂಗಣದಲ್ಲಿ ನಡೆದ ‘ಕರ್ನಾಟಕ ಕೋಸ್ಟ್ ಲೈನ್ ಬ್ಯುಸಿನೆಸ್ ಕಾನ್‌ಕ್ಲೇವ್’ ಉದ್ಘಾಟಿಸಿ ಮಾತನಾಡಿದ ಅವರು, ವಿಮಾನ ನಿಲ್ದಾಣಗಳು ಆರಂಭವಾದರೆ ಮುಂದಿನ ದಿನಗಳಲ್ಲಿ ವ್ಯಾಪಾರ, ವಹಿವಾಟಿಗೆ ಸಹಕಾರಿಯಾಗಲಿದೆ ಎಂದರು.
ಓದಿ:ರಾಜ್ಯದಲ್ಲಿ ಐದಾರು ಕೈಗಾರಿಕಾ ಟೌನ್‌ಶಿಪ್ ಮಾಡುವ ಗುರಿ : ಸಚಿವ ಜಗದೀಶ್ ಶೆಟ್ಟರ್
ಪ್ರಸ್ತುತ ಚೆನ್ನೈ ಬಂದರನ್ನೇ ಸರಕು ರಫ್ತಿಗೆ ಹೆಚ್ಚಾಗಿ ಅವಲಂಬಿಸಲಾಗುತ್ತಿದೆ. ಆದ್ದರಿಂದ ಮಂಗಳೂರು ಬಂದರಿನತ್ತ ರಫ್ತುದಾರರನ್ನು ಆಕರ್ಷಿಸಲು ಬೇಕಾದ ಅಭಿವೃದ್ಧಿ ಕೆಲಸಗಳ ವರದಿ ನೀಡಿದರೆ ಅದನ್ನು ಕಾರ್ಯಗತಗೊಳಿಸಲು ಸರ್ಕಾರ ಬದ್ಧವಾಗಿದೆ.
ಬೇಲೆಕೇರಿ ಬಂದರು ಅಭಿವೃದ್ಧಿಗೊಳಿಸಿದರೆ ಇಡೀ ಉತ್ತರ ಕರ್ನಾಟಕದ ಸರಕು ರಫ್ತಿಗೆ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಬೇಲೆಕೇರಿ ಬಂದರು ಅಭಿವೃದ್ಧಿಗೆ ಡಿಪಿಆರ್ ಸಿದ್ಧಪಡಿಸಲಾಗುತ್ತಿದೆ ಎಂದರು.
ಭೂ ಸುಧಾರಣಾ ಕಾಯ್ದೆ ತಿದ್ದುಪಡಿಯ ಪರಿಣಾಮ ಯಾರು ಬೇಕಾದರೂ ಜಮೀನು ಖರೀದಿಸಬಹುದು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾವಿರಾರು ಎಕರೆ ಭೂಮಿ ಗುರುತಿಸಿದರೆ ಹೊಸ ಕೈಗಾರಿಕಾ ವಲಯ ಸ್ಥಾಪನೆಗೆ ಸರ್ಕಾರದಿಂದ ಸಹಕಾರ ನೀಡಲು ಬದ್ಧ. ಈಗಾಗಲೇ ಪುತ್ತೂರು ಮತ್ತು ಬೆಳ್ತಂಗಡಿಯಲ್ಲಿ ತಲಾ 100 ಎಕರೆ ಜಾಗ ಗುರುತಿಸಲಾಗಿದೆ.
ಭೂಸ್ವಾಧೀನಕ್ಕೆ ಪ್ರಕ್ರಿಯೆ ಆರಂಭವಾಗಿದೆ. ಮುಂದೆ ಅಲ್ಲೂ ಕೈಗಾರಿಕೆಗಳು ಬರಲಿವೆ. ಪ್ರಸ್ತುತ ಕೈಗಾರಿಕೆಗಳು ಬೆಂಗಳೂರನ್ನೇ ಕೇಂದ್ರೀಕೃತವಾಗಿರಿಸಿಕೊಂಡಿವೆ. ಅದನ್ನು ಎರಡು ಮತ್ತು ಮೂರನೇ ಹಂತದ ನಗರಗಳಿಗೂ ವಿಸ್ತರಿಸಲು ಯೋಜಿಸಲಾಗಿದೆ.
ಹೂಡಿಕೆಯ ನಿಟ್ಟಿನಲ್ಲಿ ವಲಯವಾರು ವಿಂಗಡಣೆ ಮಾಡಲಾಗಿದೆ. ಹೂಡಿಕೆದಾರರನ್ನು ಇತರ ನಗರಗಳಿಗೂ ಆಕರ್ಷಿಸುವಂತೆ ಮಾಡಲಾಗುತ್ತಿದೆ ಎಂದು ಜಗದೀಶ್ ಶೆಟ್ಟರ್ ತಿಳಿಸಿದರು.