ಮಂಗಳೂರು: ಮೊದಲಿಗೆ ದೇಶದ ಜನತೆಯ ಜೀವ ಉಳಿಸಲು ಲಸಿಕೆಯನ್ನು ಸರಬರಾಜು ಮಾಡಿ ಆ ಬಳಿಕ ಪಾರ್ಲಿಮೆಂಟ್ ಕಟ್ಟಿಕೊಳ್ಳಿ ಎಂದು ಮಾಜಿ ಎಂಎಲ್ಸಿ ಐವನ್ ಡಿಸೋಜ ಪ್ರಧಾನಿ ಮೋದಿ ವಿರುದ್ಧ ಕಿಡಿ ಕಾರಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿರುವ ಅವರು, ಜನರ ಜೀವ ಉಳಿದ ಬಳಿಕವಲ್ಲವೇ ಪಾರ್ಲಿಮೆಂಟ್. ಪ್ರಧಾನಿ ಮೋದಿ ದೇಶದ ಜನರೆಲ್ಲರಿಗೂ ಲಸಿಕೆ ನೀಡುವೆ ಎಂದು ಹೇಳಿರುವ ವಾಗ್ದಾನವನ್ನು ಸರಿಯಾಗಿ ಪಾಲಿಸಿಲ್ಲ. ಮೋದಿಯವರಿಗೆ 130 ಕೋಟಿ ಜನರಿಗೆ ಎರಡು ಡೋಸ್ ಲಸಿಕೆ ನೀಡಲು ಸಾಧ್ಯವಿಲ್ಲವೇ. ದೇಶದಲ್ಲಿ 3 ಸಾವಿರ ಕಂಪನಿಗಳು ಲಸಿಕೆ ತಯಾರಿಸಲು ಸದಾ ಸಿದ್ಧರಿದ್ದಾರೆ. ಇದೀಗ ನಾವು ಹೋರಾಟ ನಡೆಸಿದ ಬಳಿಕ ಬೆಂಗಳೂರಿನ ಹೆಬ್ಬಾಳದಲ್ಲಿ ಲಸಿಕೆ ತಯಾರಿಕೆಗೆ ಕಂಪನಿ ಪ್ರಾರಂಭಗೊಂಡಿದೆ ಎಂದು ಡಿಸೋಜ ಹೇಳಿದರು.
ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಶಾಸಕರ ನಿಧಿಯಿಂದ ಹಾಗೂ ಕೆಪಿಸಿಸಿ ನಿಧಿಯಿಂದ 100 ಕೋಟಿ ರೂ. ನೀಡುತ್ತದೆ. ನಮಗೆ ಲಸಿಕೆ ಖರೀದಿ ಮಾಡಲು ಅವಕಾಶ ನೀಡಿ ಎಂದು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಒತ್ತಾಯ ಮಾಡಿದ್ದಾರೆ. ಈ ರೀತಿ ಲಸಿಕೆ ಕೊಡದೆ ರಾಜಕೀಯ ಮಾಡಿದ್ದಲ್ಲಿ ರಾಜ್ಯದ ಜನತೆಯನ್ನು ನೀವು ಕೊಲೆ ಮಾಡುತ್ತೀರೆಂದು ಅರ್ಥ ಎಂದು ಅವರು ಆರೋಪಿಸಿದರು.
ರಾಜ್ಯ ಸರ್ಕಾರ ಕೊರತೆಗಳ ಸರ್ಕಾರವಾಗಿದ್ದು, ಇಂತಹ ಸರ್ಕಾರ ಬದುಕಬೇಕಾ. ಇವರು ಯಾವುದರಲ್ಲಿಯೂ ಪೂರ್ಣರಲ್ಲ. ಆಡಳಿತ ಮಾಡಿಯೇ ಗೊತ್ತಿಲ್ಲ. ಆದ್ದರಿಂದ ಕೊರೊನಾ ಸೋಂಕಿನ ವಿರುದ್ಧ ಸರಿಯಾದ ಪೈಪೋಟಿ ನೀಡಲು ಸಾಧ್ಯವಿಲ್ಲ. ಈ ಮೂಲಕ ಜನರನ್ನು ಬಲಿ ತೆಗೆದುಕೊಳ್ಳುತ್ತಿದ್ದೀರಿ. ಆದ್ದರಿಂದ ನಾವು 'ಇಂಡಿಯನ್ಸ್ ನೀಡ್ ವ್ಯಾಕ್ಸಿನೇಷನ್ ನಾಟ್ ವಿಸ್ತಾ' ಜನಾಂದೋಲನ ಕಾರ್ಯಕ್ರಮವನ್ನು ಆರಂಭಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪಸರಿಸಿ ದೇಶದ ಪ್ರಧಾನಿಯ ಕಿವಿಗೆ ತಲುಪುವಂತೆ ಮಾಡುತ್ತೇವೆ ಎಂದು ಹೇಳಿದರು.