ನಗರದ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ವಲಸೆ ಕಾರ್ಮಿಕರಲ್ಲಿ ಹೋಗಿ ಕಾಂಗ್ರೆಸ್ ನಾಯಕರು ಮಾತನಾಡಿದ್ದಲ್ಲಿ ನೀವು ಕಾರ್ಮಿಕರ ಜೊತೆ ಮಾತನಾಡುತ್ತೀರಿ ಎಂಬ ಆರೋಪ ಮಾಡಲಾಗುತ್ತದೆ. ಈ ಬಗ್ಗೆ ನಮ್ಮನ್ನು ತಡೆಯಲು ನೀವು ಯಾರು ಎಂದು ಪ್ರಶ್ನಿಸಿದರು.
ನಗರದ ಗೋಲ್ಡ್ ಪಿಂಚ್ ಸಿಟಿಯಲ್ಲಿ ವಲಸೆ ಕಾರ್ಮಿಕರು ಜಮಾಯಿಸಿದ ಸಂದರ್ಭ ಯಾವುದೇ ವ್ಯವಸ್ಥೆ ಆಗಿರಲಿಲ್ಲ. ಆದರೆ ನಾವು ಅಲ್ಲಿಗೆ ಹೋಗಿ ಮಾತನಾಡಿದ ಬಳಿಕ 21 ಬಸ್ಗಳ ಮೂಲಕ ವಲಸೆ ಕಾರ್ಮಿಕರನ್ನು ತವರು ಜಿಲ್ಲೆಗೆ ಕಳುಹಿಸಿಕೊಡಲಾಯಿತು. ಇದರಲ್ಲಿ ನಿರ್ಲಕ್ಷ್ಯತನ ಎದ್ದು ಕಾಣುತ್ತಿದೆ. ಜಿಲ್ಲಾಡಳಿತ ಯಾವುದೇ ಪ್ಲ್ಯಾನ್ಗಳಿಲ್ಲದೆ ಕೆಲಸ ಮಾಡುತ್ತಿದೆ. ಸಂಸದರು, ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ ಒಬ್ಬೊಬ್ಬರು ಒಂದೊಂದು ರೀತಿ ಹೇಳಿಕೆ ನೀಡುವುದರಿಂದ ಜನರಲ್ಲಿ ಗೊಂದಲ ಮೂಡುತ್ತಿದೆ. ವಲಸೆ ಕಾರ್ಮಿಕರು ರೈಲು ನಿಲ್ದಾಣದಲ್ಲಿ ಜಮಾಯಿಸಿದಾಗ ನಾವು ಹೋಗಿರೋದು ತಪ್ಪಾಗುತ್ತದೆಯೇ ಎಂದು ಪ್ರಶ್ನಿಸಿದರು.
15 ದಿವಸಗಳ ಹಿಂದೆ ಜಿಲ್ಲಾಡಳಿತ ಹಾಗೂ ಶಾಸಕರ ಸಭೆಯಲ್ಲಿ ಯಾವ ಯಾವ ರಾಜ್ಯದ ವಲಸೆ ಕಾರ್ಮಿಕರನ್ನು ಯಾವ ರೈಲುಗಳಲ್ಲಿ ಕಳುಹಿಸಬೇಕೆಂದು ಲಿಸ್ಟ್ ಮಾಡಲಾಗಿತ್ತು. ಆ ಬಳಿಕ ಕಾಣದ ಕೈಗಳು ಲಿಸ್ಟ್ ಮಾಡಬಾರದೆಂದು ಜಿಲ್ಲಾಡಳಿತಕ್ಕೆ ಒತ್ತಡ ಹೇರಿವೆ. ಈ ಮೂಲಕ ಕಟ್ಟಡ ಕಾಮಗಾರಿ, ಕಾರ್ಖಾನೆಗಳ ಕೆಲಸಗಳು ನಿರಂತರವಾಗಿ ನಡೆಯಬೇಕೆಂಬುದು ಇದರ ಹಿಂದಿನ ಉದ್ದೇಶ. ಅಭಿವೃದ್ಧಿ ಆಗಬೇಕು, ಮಾನವ ಸಂಪನ್ಮೂಲ ಇರಬೇಕೆಂಬ ಆಲೋಚನೆ ಇದ್ದಲ್ಲಿ ವಲಸೆ ಕಾರ್ಮಿಕರನ್ನು ಬೀದಿಗೆ ಕಳಿಸಿದ್ಯಾಕೆ? ಅಲ್ಲದೆ ಅವರಿಗೆ ಸಾವಿರ ರೂ. ಚಾರ್ಜ್ ಹಾಕಿ ಬಿಹಾರ, ಉತ್ತರ ಪ್ರದೇಶ, ಜಾರ್ಖಂಡ್ಗಳಿಗೆ ಕಳಿಸಲಾಗುತ್ತದೆ. ಅಲ್ಲದೆ ಊಟಕ್ಕೂ ಚಾರ್ಜ್ ಮಾಡಲಾಗುತ್ತದೆ ಎಂದು ಹೇಳಿದರು.