ಮಂಗಳೂರು: ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದ 14 ಮಂದಿಯನ್ನು ವಶಕ್ಕೆ ಪಡೆದಿರುವ ಪೊಲೀಸರು, 63 ಸಾವಿರ ರೂ. ನಗದು ಹಾಗೂ ಜೂಜಾಟಕ್ಕೆ ಬಳಸಿದ್ದ ವಸ್ತುಗಳನ್ನು ಸ್ವಾಧೀನ ಪಡಿಸಿಕೊಂಡಿರುವ ಘಟನೆ ನಗರದ ಹೊರವಲಯದ ತೋಕೂರು ಗ್ರಾಮದ ಪಕ್ಷಿಕೆರೆಯಲ್ಲಿ ನಡೆದಿದೆ.
ರಾಜೇಶ್, ಲಕ್ಷ್ಮಣ, ಅಶೋಕ ಶೆಟ್ಟಿ, ಆಶೀರ್ವಾದ್, ಅಶೋಕ, ಸಂತೋಷ, ಜಯರಾಜ್, ಸುಧೀರ, ಸುನೀಲ ಕರ್ಕೇರ, ದಾಸ ಪ್ರಕಾಶ್, ಜೈಮೂನ್, ಹರೀಶ್ ಶೆಟ್ಟಿ, ಪ್ರವೀಣ್, ಅಬ್ದುಲ್ ನಾಸೀರ್ ಬಂಧಿತ ಆರೋಪಿಗಳು.
ಆ.15 ರಂದು ರಾತ್ರಿ ನಗರದ ತೋಕೂರಿನ ಪಕ್ಷಿಕೆರೆ ಹಿಂಭಾಗದ ರಸ್ತೆಯಲ್ಲಿರುವ ಮೌಂಟ್ ವಿಲ್ಲಾ ಎಂಬ ಮನೆಯಲ್ಲಿ ಹಣವನ್ನು ಪಣವಾಗಿರಿಸಿ ಅಂದರ್-ಬಾಹರ್ ಇಸ್ಪೀಟ್ ಜೂಜಾಟವನ್ನು ಆಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಮುಲ್ಕಿ ಪೊಲೀಸರು ಮತ್ತು ಸಿಸಿಬಿ ಘಟಕದ ಪೊಲೀಸರು ಅಡ್ಡೆ ಮೇಲೆ ದಾಳಿ ನಡೆಸಿದ್ದಾರೆ. ಈ ಸಂದರ್ಭ ಜೂಜಾಟದಲ್ಲಿ ತೊಡಗಿಕೊಂಡಿದ್ದ 14 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜೂಜಾಟದಲ್ಲಿ ಪಣವಾಗಿರಿಸಿದ್ದ 63,815 ರೂ. ನಗದು, 16 ಮೊಬೈಲ್ ಫೋನ್ಗಳು, 7 ದ್ವಿಚಕ್ರ ವಾಹನಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು ನಗರ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ , ಉಪ ಪೊಲೀಸ್ ಆಯುಕ್ತರಾದ ಅರುಣಾಂಗ್ಶುಗಿರಿ, ವಿನಯ್ ಎ. ಗಾಂವ್ಕರ್, ಮಂಗಳೂರು ಉತ್ತರ ಉಪ ವಿಭಾಗದ ಪ್ರಭಾರ ಸಹಾಯಕ ಪೊಲೀಸ್ ಆಯುಕ್ತ ಕೋದಂಡರಾಮ ಅವರ ಮಾರ್ಗದರ್ಶನದಲ್ಲಿ ಸಿಸಿಬಿ ಘಟಕದ ಪೊಲೀಸ್ ನಿರೀಕ್ಷಕ ಶಿವಪ್ರಕಾಶ್, ಮುಲ್ಕಿ ಪೊಲೀಸ್ ಠಾಣಾ ನಿರೀಕ್ಷಕ ಜಯರಾಮ ಡಿ. ಗೌಡ, ಸಿಸಿಬಿ ಘಟಕದ ಉಪ ಪೊಲೀಸ್ ನಿರೀಕ್ಷಕ ಕಬ್ಬಾಳ್ ರಾಜ್, ಮುಲ್ಕಿ ಪೊಲೀಸ್ ಠಾಣಾ ಉಪ ನಿರೀಕ್ಷಕ ದೇಜಪ್ಪ, ಸಿಸಿಬಿ ಘಟಕದ ಸಿಬ್ಬಂದಿ ಹಾಗೂ ಮುಲ್ಕಿ ಪೊಲೀಸ್ ಠಾಣಾ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.