ಮಂಗಳೂರು: ಕೊರೊನಾ ಎರಡನೇ ಅಲೆ ದೇಶಾದ್ಯಂತ ಆತಂಕ ಸೃಷ್ಟಿಸಿದೆ. ವೇಗವಾಗಿ ಹರಡುತ್ತಿರುವ ಕೊರೊನಾವನ್ನು ತಡೆಗಟ್ಟಲು ಸರ್ಕಾರ ನಿಯಮಾವಳಿಗಳನ್ನು ರೂಪಿಸಿದರೂ ಕೂಡ ಅದನ್ನು ಸರಿಯಾಗಿ ಪಾಲಿಸಲು ಹೆಚ್ಚಿನವರು ಆಸಕ್ತಿ ತೋರಿಸುತ್ತಿಲ್ಲ. ವಿಮಾನ ನಿಲ್ದಾಣದಲ್ಲಿ ಕಟ್ಟುನಿಟ್ಟಿನ ಕ್ರಮ ಪಾಲನೆಯಾಗುತ್ತಿದ್ದು, ರೈಲ್ವೆ ನಿಲ್ದಾಣಗಳಲ್ಲಿ ಕೊರೊನಾ ನಿಯಮಾವಳಿಗಳನ್ನು ಗಾಳಿಗೆ ತೂರಲಾಗಿದೆ ಎಂಬ ಆರೋಪಗಳಿವೆ.
ಕಳೆದ ವರ್ಷ ಬಂದ ಮಹಾಮಾರಿ ಕೋವಿಡ್ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಒಂದಿಷ್ಟು ದಿನಗಳ ಕಾಲ ರೈಲ್ವೆ ಮತ್ತು ವಿಮಾನ ಸಂಚಾರವನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿತ್ತು. ನಂತರ ಹಂತಹಂತವಾಗಿ ಒಂದಿಷ್ಟು ಮಾರ್ಗದಲ್ಲಿ ಸಂಚಾರ ಕೈಗೊಳ್ಳಲಾಯಿತು. ಆದ್ರೀಗ ಕೋವಿಡ್ ಎರಡನೇ ಅಲೆ ಭೀತಿ ಪರಿಣಾಮ ನಿಯಮಾವಳಿಗಳನ್ನು ಮತ್ತಷ್ಟು ಕಠಿಣಗೊಳಿಸಲಾಗಿದೆ. ಕಡ್ಡಾಯ ನೆಗೆಟಿವ್ ವರದಿ ಹೊಂದುವುದರ ಜತೆಗೆ ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸುವುದುನ್ನು ಮರೆಯುವಂತಿಲ್ಲ. ಅದರಲ್ಲೂ ವಿದೇಶಗಳಿಂದ ಬರುವವರಿಗೆ ನಿಮಯಗಳು ಮತ್ತಷ್ಟು ಕಠಿಣ.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣಗಳು ನಿತ್ಯ ಸಾವಿರಾರು ಪ್ರಯಾಣಿಕರು ಸಂಚರಿಸುವ ತಾಣಗಳಾಗಿದೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ ಕೊರೊನಾ ನಿಯಮಾವಳಿಗಳನ್ನು ಚಾಚು ತಪ್ಪದೇ ಪಾಲಿಸಲಾಗುತ್ತಿದ್ದರೆ ರೈಲ್ವೆ ನಿಲ್ದಾಣದಲ್ಲಿ ಮಾತ್ರ ಇದಕ್ಕೆ ವ್ಯತಿರಿಕ್ತ ಪರಿಸ್ಥಿತಿ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಮಂಗಳೂರು ವಿಮಾನ ನಿಲ್ದಾಣಗಳಲ್ಲಿ ಬರುವ ಅಂತಾರಾಷ್ಟ್ರೀಯ ಮತ್ತು ದೇಶಿ ಪ್ರಯಾಣಿಕರನ್ನು ಸರ್ಕಾರದ ನಿಯಮಾವಳಿಯಂತೆ ಪರಿಶೀಲನೆ ಮಾಡಲಾಗುತ್ತಿದೆ. ಕೊರೊನಾ ನೆಗೆಟಿವ್ ರಿಪೋರ್ಟ್ ಹೊಂದುವುದು ಕಡ್ಡಾಯ. ಒಂದೊಮ್ಮೆ ಕಾರಣಾಂತರಗಳಿಂದ ಆರ್ಟಿಪಿಸಿಆರ್ ರಿಪೋರ್ಟ್ ನೆಗೆಟಿವ್ ಇಲ್ಲದೆ ಇದ್ದರೆ ನಿಲ್ದಾಣದಲ್ಲೇ ತಪಾಸಣೆ ಮಾಡುವ ವ್ಯವಸ್ಥೆ ಕೂಡ ಇದೆ.
ಇದನ್ನೂ ಓದಿ: ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಟದ ಮೈದಾನಗಳ ಕೊರತೆ
ಆದರೆ ಮಂಗಳೂರು ರೈಲ್ವೆ ನಿಲ್ದಾಣದಲ್ಲಿ ಕಡ್ಡಾಯ ನಿಯಮ ಪಾಲನೆ ಕಾಣಸಿಗುತ್ತಿಲ್ಲ. ವಿವಿಧ ರಾಜ್ಯಗಳಿಂದ ಮಂಗಳೂರಿಗೆ ರೈಲ್ವೆ ಸಂಪರ್ಕ ಇದೆ. ಆದರೆ ಇಲ್ಲಿ ಕೊರೊನಾ ಪಾಸಿಟಿವ್ ಇದ್ದವರನ್ನು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿಲ್ಲ. ರೈಲ್ವೆ ನಿಲ್ದಾಣಕ್ಕೆ ಒಮ್ಮೆಯೇ ಸಾವಿರಾರು ಪ್ರಯಾಣಿಕರು ಬರುವುದರಿಂದ ಅವರ ತಪಾಸಣೆ ಒಂದು ದೊಡ್ಡ ಸವಾಲಾಗಿದೆ. ರೈಲ್ವೆ ನಿಲ್ದಾಣ ಮತ್ತು ರೈಲಿನಲ್ಲಿ ಮಾಸ್ಕ್ ಧಾರಣೆ ಮತ್ತು ಸಾಮಾಜಿಕ ಅಂತರ ಇಲ್ಲದೇ ಕೊರೊನಾ ಆತಂಕ ಮತ್ತಷ್ಟು ಹೆಚ್ಚಿದೆ.