ಮಂಗಳೂರು: ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಶಾರೀಕ್ಗೆ ಕದ್ರಿ ದೇವಸ್ಥಾನ ಸ್ಫೋಟಿಸುವ ಟಾರ್ಗೆಟ್ ಇತ್ತೆಂದು ಸಂಘಟನೆಯೊಂದು ಹೊಣೆ ಹೊತ್ತುಕೊಂಡಿರುವ ಪೋಸ್ಟರ್ ವೈರಲ್ ಆಗಿದೆ.
Islamic Resistance council ಎಂಬ ಸಂಘಟನೆಯ ಹೆಸರಿನಲ್ಲಿ ಪೋಸ್ಟರ್ವೊಂದು ವೈರಲ್ ಆಗುತ್ತಿದೆ. ಇದರಲ್ಲಿ ಆರೋಪಿ ಶಾರೀಕ್ನ ಎರಡು ಫೋಟೋಗಳನ್ನು ಬಳಸಲಾಗಿದೆ. ಈ ಪೋಸ್ಟರ್ನಲ್ಲಿ ನಮ್ಮ ಟಾರ್ಗೆಟ್ ಕದ್ರಿ ದೇವಸ್ಥಾನ ಆಗಿತ್ತು. ಗುರಿಯನ್ನು ತಲುಪುವ ಮೊದಲೇ ಬಾಂಬ್ ಸ್ಫೋಟಗೊಂಡಿದೆ. ಅಲ್ಲದೆ ಎಡಿಜಿಪಿ ಅಲೋಕ್ ಕುಮಾರ್ ಅವರಿಗೆ ನಿಮ್ಮ ಸಂತೋಷ ಕ್ಷಣಿಕವಾಗಿದೆ ಎಂದು ಬರೆಯಲಾಗಿದೆ.
ವೈರಲ್ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಎಡಿಜಿಪಿ ಅಲೋಕ್ ಕುಮಾರ್, 'ನಾವು ಸಂಘಟನೆ ಮತ್ತು ಪೋಸ್ಟ್ ಕುರಿತ ಸತ್ಯಾಸತ್ಯತೆ ಬಗ್ಗೆ ಪರಿಶೀಲಿಸುತ್ತಿದ್ದೇವೆ' ಎಂದು ಹೇಳಿದ್ದಾರೆ.
ನವೆಂಬರ್ 19ರಂದು ಮಂಗಳೂರಿನಲ್ಲಿ ಕುಕ್ಕರ್‌ನೊಂದಿಗೆ ಆಟೋರಿಕ್ಷಾದಲ್ಲಿ ಮೊಹಮ್ಮದ್ ಶಾರಿಕ್ ಪ್ರಯಾಣಿಸುತ್ತಿದ್ದ ವೇಳೆ ಸ್ಫೋಟಗೊಂಡಿದ್ದು, ಶಾರಿಕ್ ಮತ್ತು ಚಾಲಕ ಗಾಯಗೊಂಡಿದ್ದರು. ಪ್ರಾಥಮಿಕ ತನಿಖೆ ನಡೆಸಿದ್ದ ಪೊಲೀಸರು ಇದೊಂದು ಭಯೋತ್ಪಾದಕ ಕೃತ್ಯ ಎಂದು ಸ್ಪಷ್ಟಪಡಿಸಿದ್ದರು.
ಜನನಿಬಿಡ ಪ್ರದೇಶಗಳಲ್ಲಿ ತಪಾಸಣೆ: ಅಂತಾರಾಷ್ಟ್ರೀಯ ಉಗ್ರ ಸಂಘಟನೆ ಪರ ಒಲವು ಹೊಂದಿದ್ದ ಮತ್ತು ನಗರದಲ್ಲಿ ಇತ್ತೀಚೆಗೆ ಉಗ್ರರ ಪರ ಗೋಡೆ ಬರಹ ಬರೆದಿದ್ದ ಶಾರೀಕ್ ಎಂಬಾತನೇ ಈ ಕೃತ್ಯ ನಡೆಸಿದ್ದಾನೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದರು.
ವೈರಲ್ ಆದ ಸಂಘಟನೆಯ ಪೋಸ್ಟರ್ನಲ್ಲಿ ಇವರ ಹೆಸರನ್ನು ಉಲ್ಲೇಖಿಸಿ ಪರೋಕ್ಷವಾಗಿ ಎಚ್ಚರಿಕೆಯ ಸಂದೇಶ ನೀಡಿದೆ. ಇನ್ನು ಈ ಘಟನೆ ಬೆನ್ನಲ್ಲೇ ದಕ್ಷಿಣಕನ್ನಡ ಜಿಲ್ಲೆಯ ರೈಲ್ವೆ ನಿಲ್ದಾಣ, ದೇವಸ್ಥಾನ ಸೇರಿದಂತೆ ಇತರೆ ಜನನಿಬಿಡ ಪ್ರದೇಶಗಳಲ್ಲಿ ಬಾಂಬ್ ನಿಗ್ರಹ ದಳದ ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದಾರೆ.
ಘಟನೆ ನಡೆದಿದ್ದು ಯಾವಾಗ? ನವೆಂಬರ್ 19ರ ಸಂಜೆ ಆಟೋವೊಂದು ಓರ್ವ ಪ್ರಯಾಣಿಕನೊಂದಿಗೆ ನಾಗೂರಿಯಿಂದ ಪಂಪ್‌ವೆಲ್ ಕಡೆಗೆ ತೆರಳುತ್ತಿದ್ದಾಗ ಪ್ರಯಾಣಿಕನ ಚೀಲದಲ್ಲಿದ್ದ ವಸ್ತು ದಿಢೀರ್ ಸ್ಫೋಟಗೊಂಡಿತ್ತು. ಬೆಂಕಿ ಹೊತ್ತಿಕೊಂಡಿದ್ದರಿಂದ ಪ್ರಯಾಣಿಕ ಮತ್ತು ಆಟೋ ಚಾಲಕನಿಗೆ ಸುಟ್ಟ ಗಾಯಗಳಾಗಿತ್ತು.
ಆಟೋ ಚಾಲಕ ಕೆ ಪುರುಷೋತ್ತಮ (60) ನೀಡಿದ ದೂರಿನಂತೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ಪೊಲೀಸರು ತನಿಖೆ ನಡೆಸಿದಾಗ ಇದೊಂದು ಉದ್ದೇಶಪೂರ್ವಕ ಕೃತ್ಯವೆಂದು ತಿಳಿದು ಬಂದಿತ್ತು. ಶಾರೀಕ್ ಈ ಸ್ಫೋಟದ ರೂವಾರಿ ಎಂಬ ಮಾಹಿತಿ ಹೊರಬಿದ್ದಿತ್ತು.
ಉಗ್ರ ಸಂಘಟನೆ ಜೊತೆಗೆ ಲಿಂಕ್: ಆರೋಪಿ ಶಾರೀಕ್ ಜಾಗತಿಕ ಉಗ್ರ ಸಂಘಟನೆ ಜೊತೆಗೆ ಲಿಂಕ್ ಹೊಂದಿರುವ ಅಬ್ದುಲ್ ಮತೀನ್ ಎಂಬಾತನ ಸಂಪರ್ಕ ಬೆಳೆಸಿದ್ದ. ಆತನಿಂದಲೇ ಉಗ್ರ ನಿಲುವಿನತ್ತ ಪ್ರೇರೇಪಣೆ ಪಡೆದಿದ್ದ ಎಂಬ ಮಾಹಿತಿ ಕೂಡ ಇದೆ.
ಎನ್ಐಎಗೆ ವಹಿಸುವ ನಿರ್ಧಾರ: ಘಟನೆ ಬಳಿಕ ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. ಅದೇ ದಿನ ಪೊಲೀಸ್ ಕಮೀಷನರ್ ಕಚೇರಿಯಲ್ಲಿ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ ಬಳಿಕ ಮಾತನಾಡಿದ್ದ ಅವರು, ಘಟನೆ ನಡೆದ ಆರಂಭದಿಂದಲೇ ಎನ್ಐಎ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಕೇಂದ್ರ ಸರ್ಕಾರದ ಇತರ ಇಲಾಖೆಗಳು ತನಿಖೆಯಲ್ಲಿ ಕೈ ಜೋಡಿಸಿದೆ. ಪ್ರಕರಣದ ಪ್ರಾರಂಭಿಕ ತನಿಖೆಯನ್ನು ರಾಜ್ಯ ಪೊಲೀಸರು ಮಾಡುತ್ತಿದ್ದಾರೆ. ಎನ್ಐಎಗೆ ವಹಿಸುವ ಬಗ್ಗೆ ಶೀಘ್ರ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.
ಇದನ್ನೂ ಓದಿ: ಮಂಗಳೂರು ಆಟೋ ಸ್ಫೋಟ ಪ್ರಕರಣ: ಪ್ರತ್ಯಕ್ಷದರ್ಶಿ ಹೇಳಿದ್ದೇನು?