ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳಾ ಸಭಾಂಗಣದಲ್ಲಿ ಗಣೇಶೋತ್ಸವ ನಡೆಸುವ ವಿಚಾರದಲ್ಲಿ ಉಂಟಾಗಿದ್ದ ವಿವಾದ ಸುಖಾಂತ್ಯವಾಗಿದ್ದು, ಇಂದು ಮಾವಿನ ಎಲೆ, ಹೂವು ಹಾಗೂ ಬಾಳೆ ಗಿಡದಿಂದ ಸಿಂಗಾರಗೊಂಡ ಮಂಗಳಾ ಸಭಾಂಗಣದಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಜಯರಾಜ್ ಅಮೀನ್ ಅವರು ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಅರ್ಚಕರ ಸಮ್ಮುಖದಲ್ಲಿ ಸಕಲ ಧಾರ್ಮಿಕ ವಿಧಿ-ವಿಧಾನಗಳನ್ನು ನೆರವೇರಿಸಿದರು. ಪ್ರತಿಷ್ಠಾಪನೆ ಸಮಾರಂಭದಲ್ಲಿ ವಿವಿ ವಿದ್ಯಾರ್ಥಿಗಳು, ಬೋಧಕ-ಬೋಧಕೇತರ ಸಿಬ್ಬಂದಿ, ಸ್ಥಳೀಯರು ಭಾಗಿಯಾದರು.
ನಂತರ ಅರ್ಚಕರ ಸಮ್ಮುಖದಲ್ಲಿ ಪಂಚೆ, ಶಾಲು ತೊಟ್ಟು ಉಪಕುಲಪತಿ ಜಯರಾಜ್ ಅಮೀನ್ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ವಿವಿಯ ಮಂಗಳಾ ಆಡಿಟೋರಿಯಂ ಒಳಭಾಗದಲ್ಲಿ ಮಂಗಳೂರು ನಗರ ಡಿಸಿಪಿ ಸಿದ್ದಾರ್ಥ್ ಗೋಯಲ್ ನೇತೃತ್ವದಲ್ಲಿ ಪೊಲೀಸ್ ಭದ್ರತೆ ಮಾಡಲಾಗಿತ್ತು. ಇನ್ನು ಮಂಗಳೂರು ವಿವಿ ಸುತ್ತಮುತ್ತ ಭಾರಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಕೆಎಸ್ಆರ್ಪಿ ಸೇರಿದಂತೆ ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್, ಶಾಸಕ ಡಾ. ಭರತ್ ಶೆಟ್ಟಿ ಜೊತೆಗೂಡಿ ಪೂಜೆ ಸಲ್ಲಿಸಿದರು. ಮಹಾ ಪೂಜೆ ಬಳಿಕ ಬಿಜೆಪಿ ಮತ್ತು ಹಿಂದೂ ಮುಖಂಡರು ಪ್ರಸಾದ ಸ್ವೀಕರಿಸಿದರು.
ವಿವಾದ ಏತಕ್ಕೆ?: ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳಾ ಸಭಂಗಣದಲ್ಲಿ ಕಳೆದ ಕೆಲ ವರ್ಷಗಳಿಂದ ಗಣೇಶ ಚತುರ್ಥಿಯನ್ನು ಆಚರಣೆ ಮಾಡಲಾಗುತ್ತಿತ್ತು. ಅದಕ್ಕೂ ಹಿಂದೆ ವಿಶ್ವವಿದ್ಯಾನಿಲಯದ ಪುರುಷರ ಹಾಸ್ಟೆಲ್ನಲ್ಲಿ ಆಚರಣೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಮಂಗಳಾ ಸಭಾಂಗಣದಲ್ಲಿ ಗಣೇಶ ಚತುರ್ಥಿ ಆಚರಣೆ ಮಾಡಲು ಅವಕಾಶ ಇರುವುದಿಲ್ಲ ಎಂಬ ಉಪಕುಲಪತಿಗಳ ನಿರ್ಧಾರದಿಂದ ಅಸಮಾಧಾನ ಭುಗಿಲೆದ್ದಿತ್ತು.
ಆರಂಭದಲ್ಲಿ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಉಪಕುಲಪತಿಗಳಲ್ಲಿ ಈ ಬಗ್ಗೆ ಚರ್ಚಿಸಿ ಮಂಗಳ ಸಭಾಂಗಣದಲ್ಲಿಯೇ ಗಣೇಶ ಚತುರ್ಥಿ ಮಾಡಬೇಕು ಮತ್ತು ಎರಡು ಲಕ್ಷವನ್ನು ವಿಶ್ವವಿದ್ಯಾನಿಲಯದ ವತಿಯಿಂದ ನೀಡಬೇಕು ಆಗ್ರಹಿಸಿದ್ದರು. ಈ ಬಗ್ಗೆ ಕುಲಪತಿಗಳು ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ಸಲಹೆ ಸೂಚನೆ ನೀಡುವಂತೆ ತಿಳಿಸಿದ್ದರು. ಆ ಬಳಿಕ ಕುಲಪತಿಗಳು ಪ್ರಕಟಣೆಯನ್ನು ಹೊರಡಿಸಿ ಈ ಬಾರಿಯ ಗಣೇಶ ಚತುರ್ಥಿಯನ್ನು ಈ ಹಿಂದೆ ನಡೆಯುತ್ತಿದ್ದ ಪುರುಷರ ಹಾಸ್ಟೆಲ್ನಲ್ಲಿ ನಡೆಸಲಾಗುವುದು ಎಂದು ತಿಳಿಸಿದ್ದರು. ಆದರೂ ಇದಕ್ಕೆ ವಿರೋಧ ವ್ಯಕ್ತವಾಗಿತ್ತು.
ಇದೇ ಸಂದರ್ಭದಲ್ಲಿ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ವಿಧಾನಸಭೆಯ ಸ್ಪೀಕರ್ ಯುಟಿ ಖಾದರ್ ಅವರು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಗಣೇಶ ಚತುರ್ಥಿ ಮಾಡುವ ವಿಚಾರದಲ್ಲಿ ಹೊರಗಿನವರು ಬರುವುದು ಬೇಡ. ಅದು ಉಪಕುಲಪತಿಗಳು ನಿರ್ಧರಿಸಲಿ ಎಂದು ತಿಳಿಸಿದ್ದರು. ಆನಂತರದಲ್ಲಿ ಮಂಗಳೂರಿನ ಅಸೈಗೋಳಿಯಲ್ಲಿ ಪ್ರತಿಭಟನೆ ನಡೆಸಿದ ಹಿಂದೂ ಸಂಘಟನೆ ಕಾರ್ಯಕರ್ತರು ಗಣೇಶ ಚತುರ್ಥಿಯನ್ನು ಮಂಗಳ ಸಭಾಂಗಣದಲ್ಲಿ ನಡೆಸುವಂತೆ ಆಗ್ರಹಿಸಿದ್ದರು. ಈ ಪ್ರತಿಭಟನೆಯಲ್ಲಿ ಮಾತನಾಡಿದ್ದ ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಮಂಗಳೂರು ವಿಶ್ವವಿದ್ಯಾಲಯದ ಮಂಗಳ ಸಭಾಂಗಣದಲ್ಲಿ ಗಣೇಶ ಚತುರ್ಥಿ ಮಾಡಿಯೇ ಸಿದ್ಧ. ನಾವು ಅಲ್ಲಿಗೆ ಹೋಗುತ್ತೇವೆ, ಸಾಧ್ಯವಿದ್ದರೆ ತಡೆಯಲಿ ಎಂದು ಸವಾಲು ಹಾಕಿದ್ದರು.
ಬಳಿಕ ವಿವಿಯ ಉಪಕುಲಪತಿ ಪ್ರೊ ಜಯರಾಜ್ ಅಮೀನ್ ಅವರು ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳಾ ಸಭಾಂಗಣದಲ್ಲಿಯೇ ಗಣೇಶ ಚತುರ್ಥಿ ಆಚರಿಸಲು ಅನುಮತಿ ನೀಡಿದ್ದರು.
ಇದನ್ನೂ ಓದಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗಣೇಶ ಚತುರ್ಥಿ, ತೆನೆ ಹಬ್ಬ ಸಂಭ್ರಮ