ಮಂಗಳೂರು: ಮಹಾನಗರ ವ್ಯಾಪ್ತಿಯ ಪಚ್ಚನಾಡಿ ಹಾಗೂ ಮಂದಾರ ಪ್ರದೇಶಗಳಿಗೆ ಭೇಟಿ ನೀಡಿದ ದ.ಕ.ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಕಳೆದ ಬಾರಿ ನಡೆದ ಘನತ್ಯಾಜ್ಯ ಕುಸಿತದಿಂದ ಸಾರ್ವಜನಿಕ ಆಸ್ತಿ-ಪಾಸ್ತಿಗಳಿಗೆ ಹಾನಿಯಾಗಿರುವ ಬಗ್ಗೆ ಮಾಹಿತಿ ಪಡೆದರು.
ಈ ಸಂದರ್ಭ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು, ಈ ಪ್ರದೇಶಗಳ ಸಂತ್ರಸ್ತರಿಗೆ ಆಗಿರುವ ನಷ್ಟವನ್ನು ಮೊದಲನೆಯ ಆದ್ಯತೆಯಲ್ಲಿ ಎಲ್ಲರಿಗೂ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಅಲ್ಲದೆ ಕುಸಿತವಾಗಿರುವ ತ್ಯಾಜ್ಯ ತೆರವುಗೊಳಿಸಲು ಈಗಾಗಲೇ ಸಲ್ಲಿಸಲಾಗಿರುವ ಪ್ರಸ್ತಾವನೆಗಳನ್ನು ಪರಿಶೀಲಿಸಲಾಗುತ್ತದೆ. ವೇಸ್ಟ್ ಟು ಎನರ್ಜಿಗೆ ಸಂಬಂಧಿಸಿ ಬೆಂಗಳೂರಿನ ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ಇವರಿಂದ ಬಂದಿರುವ ಪ್ರಸ್ತಾವನೆಯಂತೆ ಉಡುಪಿ ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಿ ಮುಂದಿನ ದಿನಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭ ಶಾಸಕ ಡಾ.ವೈ.ಭರತ್ ಶೆಟ್ಟಿ, ಮಂಗಳೂರು ಮನಪಾ ಪ್ರಭಾರ ಆಯುಕ್ತ ದಿನೇಶ್ ಕುಮಾರ್, ಮಂಗಳೂರು ಮನಪಾ ಸದಸ್ಯೆ ಸಂಗೀತಾ ನಾಯಕ್, ಮಹಾನಗರ ಪಾಲಿಕೆಯ ಅಧಿಕಾರಿಗಳು ಉಪಸ್ಥಿತರಿದ್ದರು.