ಮಂಗಳೂರು: ರಾಜ್ಯ ಸರ್ಕಾರವು ಕ್ರೈಸ್ತ ಅಭಿವೃದ್ಧಿ ನಿಗಮವನ್ನು ರದ್ದುಪಡಿಸುವ ಮೂಲಕ ಕ್ರೈಸ್ತ ಸಮುದಾಯಕ್ಕೆ ದೊಡ್ಡ ಅನ್ಯಾಯವೆಸಗಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ ಆರೋಪಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕುಮಾರಸ್ವಾಮಿ ಸರ್ಕಾರದಲ್ಲಿ ಸ್ಥಾಪಿಸಲಾದ ಕ್ರೈಸ್ತ ಅಭಿವೃದ್ಧಿ ನಿಗಮಕ್ಕೆ 200 ಕೋಟಿ ಅನುದಾನ ನೀಡಲಾಗಿತ್ತು. ಈಗ ರಾಜ್ಯ ಸರ್ಕಾರ ಅದನ್ನು ರದ್ದುಪಡಿಸಿದೆ. ಕ್ರೈಸ್ತ ಸಮುದಾಯದಲ್ಲಿರುವ ಬಡವರಿಗೆ, ಶೈಕ್ಷಣಿಕವಾಗಿ ಹಿಂದುಳಿದವರಿಗೆ ಉದ್ಯೋಗ ದೊರಕಿಸಿಕೊಡಲು, ಅವರಿಗೆ ತರಬೇತಿ ಕೊಡಲು ಮತ್ತು ಸಮಾಜದ ಮುಖ್ಯವಾಹಿನಿಗೆ ತರಲು ನಿಗಮವನ್ನು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಸ್ಥಾಪಿಸಲಾಗಿತ್ತು. ಅದರ ನಂತರದ ಎಲ್ಲಾ ಯೋಜನೆಗಳು ಜಾರಿಗೆ ಬಂದಿವೆ. ಆದರೆ ಕ್ರೈಸ್ತ ಅಭಿವೃದ್ಧಿ ನಿಗಮ ಮಾತ್ರ ರದ್ದುಪಡಿಸಲಾಗಿದೆ.
ರಾಜ್ಯ ಸರ್ಕಾರ ಕ್ರೈಸ್ತ ಅಭಿವೃದ್ಧಿ ನಿಗಮ ರದ್ದುಪಡಿಸಿರುವುದರ ವಿರುದ್ಧ ಡಿಸೆಂಬರ್ 4ರಂದು ಮಂಗಳೂರಿನಲ್ಲಿ ಕ್ರೈಸ್ತ ಸಮುದಾಯದಿಂದ ಉಪವಾಸ ಸತ್ಯಾಗ್ರಹ ನಡೆಸಲಾಗುವುದು. ಮಂಗಳೂರಿನಲ್ಲಿ ಆರಂಭವಾಗುವ ಈ ಪ್ರತಿಭಟನೆ ರಾಜ್ಯಾದ್ಯಂತ ನಡೆಸಲಾಗುವುದು. ಸಮುದಾಯಕ್ಕೆ ಆಗಿರುವ ಅನ್ಯಾಯದ ವಿರುದ್ಧ ಬೀದಿಗಿಳಿದು ಹೋರಾಟ ಮಾಡಲಾಗುವುದು. ನಿಗಮ ಆರಂಭಿಸುವವರೆಗೆ ಸತತ ಹೋರಾಟ ನಡೆಸಲಾಗುವುದು ಎಂದರು.