ಮಂಗಳೂರು (ದ.ಕ): ಸ್ಮಾರ್ಟ್ ಸಿಟಿ ವತಿಯಿಂದ ವೆನ್ಲಾಕ್ ಜಿಲ್ಲಾಸ್ಪತ್ರೆ ಹಾಗೂ ಲೇಡಿಗೋಷನ್ ಆಸ್ಪತ್ರೆಗಳ ಅಭಿವೃದ್ಧಿಗಾಗಿ ವಿವಿಧ ಕಾಮಗಾರಿಗಳಿಗೆ ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ಜಂಟಿಯಾಗಿ ಚಾಲನೆ ನೀಡಿದರು.
ಕೋವಿಡ್ ಭೀತಿಯಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದ ಕಾಮಗಾರಿ ನಡೆಯುವ ಸ್ಥಳದಲ್ಲಿ ಕಾರ್ಯಕ್ರಮ ನಡೆಸದೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಾಂಕೇತಿಕ ಚಾಲನೆ ನೀಡಲಾಯಿತು.
ವೆನ್ಲಾಕ್ ಜಿಲ್ಲಾಸ್ಪತ್ರೆಯ ಆವರಣದ ಸಮಗ್ರ ಅಭಿವೃದ್ಧಿಗೆ 5.83 ಕೋಟಿ ರೂ. ಹಾಗೂ ಲೇಡಿಗೋಷನ್ ಆಸ್ಪತ್ರೆಯ ಆವರಣದಲ್ಲಿರುವ ಹೆಚ್ಚುವರಿ ಕಟ್ಟಡದ 2ನೇ ಮಹಡಿಯ ನಿರ್ಮಾಣಕ್ಕೆ 2.31 ಕೋಟಿ ರೂ. ವೆಚ್ಚದಲ್ಲಿ ಈ ಕಾಮಗಾರಿ ನಡೆಯಲಿದೆ.
ಕಾಮಗಾರಿಗೆ ಚಾಲನೆ ನೀಡಿ ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಸ್ಮಾರ್ಟ್ ಸಿಟಿಯಿಂದ ಮಂಗಳೂರು ಮಹಾನಗರದ ಬಹುಮುಖ್ಯ ಪ್ರದೇಶ ಹಾಗೂ ಸೌಕರ್ಯಗಳಿಗಾಗಿ ಈಗಾಗಲೇ 1 ಸಾವಿರ ಕೋಟಿ ರೂ. ಹಣವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಕಾಲಕಾಲಕ್ಕೆ ಬಿಡುಗಡೆಯಾಗುತ್ತಿದೆ.
ಅತ್ಯಂತ ವೇಗವಾಗಿ ಈ ಕಾಮಗಾರಿಗಳನ್ನು ಮುಗಿಸಬೇಕೆನ್ನುವುದು ಸರ್ಕಾರದ ಆಶಯ. ಇಂದು ವೆನ್ಲಾಕ್ ಆಸ್ಪತ್ರೆಯ ಸಮಗ್ರ ಅಭಿವೃದ್ಧಿಗೆ 5.83 ಕೋಟಿ ರೂ. ಹಾಗೂ ಲೇಡಿಗೋಷನ್ ಆಸ್ಪತ್ರೆಯ ಹೆಚ್ಚುವರಿ ಕಟ್ಟಡದ 2ನೇ ಮಹಡಿ ನಿರ್ಮಾಣಕ್ಕೆ 2.31ಕೋಟಿ ರೂ. ಸ್ಮಾರ್ಟ್ ಸಿಟಿಯಿಂದ ಬಿಡುಗಡೆ ಮಾಡಲಾಗಿದೆ.
ಈ ಮೂಲಕ ಆರೋಗ್ಯಕ್ಕೆ ಸಂಬಂಧಪಟ್ಟಂತೆ 2 ಮಹತ್ವದ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಈ ಕಾರ್ಯಕ್ರಮದ ಮೂಲಕ ಮಂಗಳೂರು ಮತ್ತಷ್ಟು ಸ್ಮಾರ್ಟ್ ಹಾಗೂ ವ್ಯವಸ್ಥಿತವಾಗಲಿ ಎಂದರು.
ಈ ಸಂದರ್ಭ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್, ಮಂಗಳೂರು ಮೇಯರ್ ದಿವಾಕರ ಪಾಂಡೇಶ್ವರ, ಅಪರ ಜಿಲ್ಲಾಧಿಕಾರಿ ರೂಪಾ ಎಂ ಜೆ, ಮೊಹಮ್ಮದ್ ನಜೀರ್ ಉಪಸ್ಥಿತರಿದ್ದರು.