ಉಳ್ಳಾಲ: ಹಿರಿಯರ ಮಾರ್ಗದರ್ಶನದಲ್ಲಿ ಮುನ್ನಡೆದರೆ ಯಾವುದೇ ರೀತಿಯ ಸಮಸ್ಯೆ ಬರಲು ಸಾಧ್ಯವಿಲ್ಲ. ಸಕಾರಾತ್ಮಕ ಧೋರಣೆಯ ಮೂಲಕ ಅಭಿವೃದ್ದಿಯಾಗಿರುವ ಪಾವೂರು ಗ್ರಾಮವನ್ನು ಸೌಹಾರ್ದ ಗ್ರಾಮವನ್ನಾಗಿ ರೂಪಿಸಬಹುದು ಎಂದು ಶಾಸಕ ಯು.ಟಿ. ಖಾದರ್ ಅಭಿಪ್ರಾಯಪಟ್ಟರು.
ಪಾವೂರು ಸೌಹಾರ್ದ ಗ್ರಾಮ ನಾಮಕರಣ ಹಾಗೂ ಪಾವೂರು ಪಂಚಾಯತ್ ಜಂಕ್ಷನ್ ನಲ್ಲಿ ಯು.ಟಿ. ಫರೀದ್ ಸ್ಮರಣಾರ್ಥ ಸ್ವಾಗತ ದ್ವಾರ ನಿರ್ಮಾಣಕ್ಕೆ ಭಾನುವಾರ ಶಿಲಾನ್ಯಾಸಗೈದು ಮಾತನಾಡಿದ ಯು.ಟಿ.ಖಾದರ್, ಧಾರ್ಮಿಕ ವಿಚಾರದಲ್ಲಿ ಮಾರ್ಗದರ್ಶನ ನೀಡಲು ಗುರುಗಳಿದ್ದಾರೆ. ಅದು ಬಿಟ್ಟು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡಿಸಿ ಸಮಾಜದಲ್ಲಿ ಗೊಂದಲ ಸೃಷ್ಟಿಸುವುದು ಸರಿಯಲ್ಲ. ಇದೀಗ ಪಾವೂರಿನಲ್ಲಿ ಮಾದರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಭವಿಷ್ಯದ ದಿನಗಳಲ್ಲಿ ಗ್ರಾಮದಲ್ಲಿ ಇನ್ನಷ್ಟು ಅಭಿವೃದ್ಧಿ ಕಾಣಲು ಸಹಕಾರಿಯಾಗಲಿದೆ ಎಂದು ಹೇಳಿದರು.
ಅಲ್‌ಮುಬಾರಕ್ ಜುಮಾ ಮಸೀದಿಯ ಅಧ್ಯಕ್ಷ ಅಲ್ತಾಫ್ ಹಾಮದ್, ಪಾವೂರು ಶ್ರೀ ವೈದ್ಯನಾಥ ದೈವಸ್ಥಾನದ ಅಧ್ಯಕ್ಷ ಬಾಲಕೃಷ್ಣ , ಉಳಿಯ ಇನ್ಫೆಂಟ್ ಜೀಸಸ್ ಚರ್ಚ್ ಅಧ್ಯಕ್ಷ ಗಿಲ್ಬರ್ಟ್ ಡಿಸೋಜ ಸ್ವಾಗತ ದ್ವಾರಕ್ಕೆ ಶಿಲಾನ್ಯಾಸ ನೆರವೇರಿಸಿದರು.
ಈ ಸಂದರ್ಭದಲ್ಲಿ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ ಅಸೈಗೋಳಿ, ಜಿಲ್ಲಾ ಅಲ್ಪ ಸಂಖ್ಯಾತ ಘಟಕದ ಎನ್.ಎಸ್. ಕರೀಂ, ಬ್ಲಾಕ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಆಲ್ವಿನ್ ಡಿಸೋಜ ಉಪಸ್ಥಿತರಿದ್ದರು.