ಮಂಗಳೂರು: ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣದಲ್ಲಿ ಗಾಯಗೊಂಡಿರುವ ಸಂತ್ರಸ್ತ ಆಟೋ ರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿ ಅವರ ಆರೋಗ್ಯದಲ್ಲಿ ಸುಧಾರಣೆಯಾಗಿದೆ. ಆರೋಪಿ ಮಾತನಾಡುವ ಸ್ಥಿತಿಯಲ್ಲಿ ಇಲ್ಲ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಹೇಳಿದ್ದಾರೆ.
ಸ್ಪೋಟದಿಂದ ಗಾಯಗೊಂಡು ಮಂಗಳೂರಿನ ಕಂಕನಾಡಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತ ಮತ್ತು ಆರೋಪಿಯ ಆರೋಗ್ಯವನ್ನು ಡಿಸಿಪಿ ಅಂಶುಕುಮಾರ್ ಜೊತೆಗೆ ಕಮಿಷನರ್ ಶಶಿಕುಮಾರ್ ಪರಿಶೀಲನೆ ನಡೆಸಿದರು. ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಯುವಕರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋಗೆ ಮತ್ತು ಆರೋಪಿಗಳಿಗೆ ಸಂಬಂಧವಿಲ್ಲ. ಇದು ಸತ್ಯಕ್ಕೆ ದೂರವಾದದ್ದು ಎಂದರು.
ನಗರದಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಶ್ವಾನದಳ ಮೂಲಕವೂ ಪರಿಶೀಲನೆ ನಡೆಸಲಾಗುತ್ತಿದೆ. ಜನನಿಬಿಡ ಪ್ರದೇಶ, ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ಮಾಲ್, ಧಾರ್ಮಿಕ ಕೇಂದ್ರಗಳಲ್ಲಿ ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ: ಸಂಡೂರು ಮೂಲದ ಟೆಕ್ಕಿಯ ದಾಖಲೆ ನೀಡಿ ಸಿಮ್ ಕಾರ್ಡ್: ಮೈಸೂರಲ್ಲಿ ಎನ್ಐಎ ಶೋಧ
ಇಶಾ ಫೌಂಡೇಶನ್ ದಾಳಿಯ ಬಗ್ಗೆ ತನಿಖೆ: ಕೊಯಮತ್ತೂರು ಬ್ಲಾಸ್ಟ್ಗೆ ಸಂಬಂಧಿಸಿದಂತೆ ಇಶಾ ಪೌಂಡೇಶನ್ ಮೇಲೆ ಟಾರ್ಗೆಟ್ ಇದ್ದ ಹಿನ್ನೆಲೆಯಲ್ಲಿ ಇದೇ ಆರೋಪಿ ದಾಳಿಗೆ ಯೋಜಿಸಿದ್ದನೇ ಎಂಬ ಬಗ್ಗೆಯೂ ತನಿಖೆ ನಡೆಸಲಾಗುವುದು. ಆರೋಪಿ ಎಲ್ಲೆಲ್ಲಿಗೆ ಹೋಗಿದ್ದ ಎಂಬ ಕುರಿತೂ ತನಿಖೆ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.