ಮಂಗಳೂರು: ಬಜ್ಪೆಯ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 4,35,200 ರೂ. ಮೌಲ್ಯದ ವಿದೇಶಿ ಕರೆನ್ಸಿ ಪತ್ತೆ ಮಾಡಿ, ಆರೋಪಿಯನ್ನು ಬಂಧಿಸಲಾಗಿದೆ.
ಕೇರಳದ ಚಿತ್ತಾರಿ ಬಾರಿಕ್ಕಾಡ್ನ ತಾಜುದ್ದೀನ್ ಬಂಧಿತ ಆರೋಪಿ. ಈತ ಏರ್ ಇಂಡಿಯಾ ವಿಮಾನದಲ್ಲಿ ದುಬೈಗೆ ಪ್ರಯಾಣಿಸಲು ಗುರುವಾರ ಸಂಜೆ 4:30ರ ವೇಳೆಗೆ ವಿಮಾನ ನಿಲ್ದಾಣಕ್ಕೆ ಬಂದಿದ್ದ. ತಪಾಸಣೆ ವೇಳೆ ಆತ ಒಳ ಉಡುಪಿನಲ್ಲಿಟ್ಟು ಸಾಗಿಸುತ್ತಿದ್ದ ಯೂರೊ ಹಾಗೂ ಯುಎಇ ದಿರ್ಹಂ ಪತ್ತೆಯಾಗಿದೆ.
ಸಿಐಎಸ್‌ಎಫ್ ಅಧಿಕಾರಿ ದೇವೇಂದರ್ ಸಿಂಗ್ ತಪಾಸಣೆ ನಡೆಸಿ ಅಕ್ರಮ ಸಾಗಣೆ ಮಾಡುತ್ತಿದ್ದ ವಿದೇಶಿ ಕರೆನ್ಸಿ ಪತ್ತೆ ಮಾಡಿದ್ದಾರೆ. ಆರೋಪಿ ಮತ್ತು ವಶಪಡಿಸಿಕೊಂಡ ಕರೆನ್ಸಿಯನ್ನು ಮುಂದಿನ ತನಿಖೆಗೆ ಕಸ್ಟಮ್ಸ್ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ