ಮಂಗಳೂರು: ಐಡಿಯಲ್ ಐಸ್ ಕ್ರೀಂ ದೇಶಾದ್ಯಂತ ಹೆಸರುಗಳಿಸಿರುವ ಜನಪ್ರಿಯ ಬ್ರ್ಯಾಂಡ್. ಎಲ್ಲಾ ಸೀಸನ್ನಲ್ಲೂ ಜನ ಮುಗಿಬಿದ್ದು ಇಲ್ಲಿ ಐಸ್ ಕ್ರೀಂ ಸವಿಯುತ್ತಾರೆ. ಇಂತಹ ಗ್ರಾಹಕರಿಗೆಂದೇ ಐಡಿಯಲ್ ಇದೀಗ ನೂತನ ಪ್ರಯೋಗಕ್ಕೆ ಮುಂದಾಗಿದೆ.
ಐಡಿಯಲ್ ಮಾಲಿಕತ್ವದ ಪಬ್ಬಾಸ್ ಐಡಿಯಲ್ ಸಂಸ್ಥೆಯಲ್ಲಿ ‘ಐ ಥಾಲಿ’ ಎಂಬ ವಿನೂತನ ಪರಿಕಲ್ಪನೆಯನ್ನು ಪರಿಚಯಿಸಲಾಗುತ್ತಿದೆ. ಇದು ಸಾಂಪ್ರದಾಯಿಕ ಶೈಲಿಯ ಊಟದ ರೀತಿಯಲ್ಲಿ ಐಸ್ ಕ್ರೀಂ ಸವಿಯುವ ಹೊಸ ಪ್ರಯೋಗ. ಅಂದರೆ, ಬಾಳೆಎಲೆ ಮಾದರಿಯ ತಟ್ಟೆಯಲ್ಲಿ ಊಟದ ಮಾದರಿಯಲ್ಲೇ ಐಸ್ ಕ್ರೀಂ ಸವಿಯಲು ಸಿಗುತ್ತದೆ.
‘ಐ ಥಾಲಿ’ ಆರ್ಡರ್ನಲ್ಲಿ ಸುಮಾರು 10 ರೀತಿಯ ಐಸ್ ಕ್ರೀಂಗಳು ನಿಮ್ಮ ಬಾಳೆ ಎಲೆ ತಟ್ಟೆಯಲ್ಲಿ ರುಚಿಸಲು ಸಿಗುತ್ತವೆ. ಉಪ್ಪಿನಕಾಯಿ ಬದಲಿಗೆ ಸ್ಟ್ರಾಬೆರಿ ಕ್ರಶ್, ಕೋಸಂಬರಿ ಬದಲಿಗೆ ನಟ್ಸ್ ಮಿಶ್ರಿತ ಜೆಲ್ಲೊ, ಅದೇ ರೀತಿ ನಾಲ್ಕು ಬಗೆಯಲ್ಲಿ ಬಟರ್ ಸ್ಕಾಚ್, ಸ್ಟ್ರಾಬೆರಿ ಸ್ಪೆಷಲ್, ಅರೇಬಿಯನ್ ಡಿಲೈಟ್, ಬ್ಲಾಕ್ ಕರೆಂಟ್ ಐಸ್ ಕ್ರೀಂಗಳು ವಿವಿಧ ಪಲ್ಯಗಳನ್ನು ಪ್ರತಿನಿಧಿಸುತ್ತವೆ.
ಇದರ ಜೊತೆ ರೈಸ್ ರೀತಿಯಲ್ಲಿ ವೆನಿಲ್ಲಾ ಐಸ್ ಕ್ರೀಂ ನೀಡಿ ಅದರ ಮೇಲೆ ಗಾಜರ್ ಹಲ್ವಾ ಹಾಕಲಾಗುತ್ತದೆ. ಇದು ಅನ್ನದ ಮೇಲಿನ ರಸಂನಂತೆ ಕಂಡುಬರುತ್ತದೆ. ಊಟದ ಕೊನೆಯಲ್ಲಿ ತಾಂಬೂಲಕ್ಕೆ ಮರ್ಝಿ ಪಾನ್ ಐಸ್ ಕ್ರೀಂ ನೀಡಲಾಗಿದೆ. ಈ ಐಸ್ ಕ್ರೀಂಗೆ 279 ರೂಪಾಯಿ ನಿಗದಿ ಮಾಡಲಾಗಿದ್ದು, ಗ್ರಾಹಕರು ಐ ಥಾಲಿ ಸವಿಗೆ ಮಾರುಹೋಗಿದ್ದಾರೆ.
ಈ ಹೊಸ ಪ್ರಯೋಗ ಕುರಿತಂತೆ ಐಡಿಯಲ್ ಮಾಲೀಕ ಮುಕುಂದ ಪ್ರಭು ಪ್ರತಿಕ್ರಿಯಿಸಿ, 'ಐ ಥಾಲಿ ಪರಿಕಲ್ಪನೆಯನ್ನು ಮೊದಲ ಬಾರಿಗೆ ಪರಿಚಯಿಸಿದ್ದೇವೆ. ಗ್ರಾಹಕರು ಮೆಚ್ಚಿಕೊಂಡಿದ್ದಾರೆ. ಮೊದಲ ದಿನವೇ 100ಕ್ಕಿಂತಲೂ ಅಧಿಕ ಐ ಥಾಲಿ ಸವಿದಿದ್ದಾರೆ. ಮುಂದಿನ ದಿನಗಳಲ್ಲಿ ನಮ್ಮ ಇತರ ಮಳಿಗೆಗಳಿಗಲ್ಲೂ ಇದನ್ನು ನೀಡಲಿದ್ದೇವೆ. ಕೇವಲ 5 ನಿಮಿಷದಲ್ಲಿಯೇ 'ಐ ಥಾಲಿ' ಪರಿಕಲ್ಪನೆಯನ್ನು ರೆಡಿ ಮಾಡಿದ್ದೇವೆ' ಎಂದಿದ್ದಾರೆ.
ಇದನ್ನೂ ಓದಿ: ಮಂಗಳೂರಿನಲ್ಲಿ ಸಮುದ್ರಪಾಲಾಗುತ್ತಿದ್ದ ಇಬ್ಬರ ರಕ್ಷಣೆ : ವಿಡಿಯೋ ನೋಡಿ