ಬೆಳ್ತಂಗಡಿ: ದರೋಡೆಕೋರರು ಮನೆಗೆ ನುಗ್ಗಿ ಚಿನ್ನಾಭರಣ, ನಗದು ದರೋಡೆ ಮಾಡಿದ ಘಟನೆ ತಾಲೂಕಿನ ಕೊಕ್ಕಡ ಸಮೀಪದ ಕೌಕ್ರಾಡಿ ಗ್ರಾಮದಲ್ಲಿ ನಡೆದಿದೆ.
ಸೌತಡ್ಕ ದೇವಸ್ಥಾನಕ್ಕೆ ತೆರಳುವ ರಸ್ತೆ ಸಮೀಪದ ವಿಶ್ವಹಿಂದೂ ಪರಿಷತ್ನ ಕೊಕ್ಕಡ ವಲಯ ಅಧ್ಯಕ್ಷರಾಗಿದ್ದ ನೂಜೆ ತುಕ್ರಪ್ಪ ಶೆಟ್ಟಿಯವರ ಮನೆಗೆ ಸುಮಾರು 9 ಮಂದಿ ದರೋಡೆಕೋರರ ತಂಡ ಸೋಮವಾರ ಸುಮಾರು ಮಧ್ಯರಾತ್ರಿ 2.30 ಕ್ಕೆ ನುಗ್ಗಿ ಮನೆಯ ಯಜಮಾನ ಮತ್ತು ಅವರ ಪತ್ನಿ ಮೇಲೆ ಹಲ್ಲೆ ನಡೆಸಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ನಗದು ದೋಚಿದ್ದಾರೆ. ಒಂಬತ್ತು ಮಂದಿ ಇದ್ದ ದರೋಡೆಕೋರರ ತಂಡ ಇವರನ್ನು ಸ್ಥಳದಲ್ಲೇ ಕೂಡಿ ಹಾಕಿ ಹಲ್ಲೆ ನಡೆಸಿದ ಸಂದರ್ಭ ತುಕ್ರಪ್ಪ ಶೆಟ್ಟಿಯವರ ಪತ್ನಿಗೆ ಚೂರಿಯಿಂದ ಹೊಟ್ಟೆಗೆ ಎರಡು ಬಾರಿ ಇರಿದಿದ್ದು, ತೀವ್ರ ಗಾಯಗಳಾಗಿವೆ. ಕೂಡಲೇ ಇವರನ್ನು ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.
ಮನೆಯಲ್ಲಿ ಪತಿ, ಪತ್ನಿ ಮತ್ತು ಇಬ್ಬರು ಸಣ್ಣ ಮಕ್ಕಳು ಮಾತ್ರ ಈ ಸಂದರ್ಭದಲ್ಲಿ ಇದ್ದುದರಿಂದ ದರೋಡೆಕೋರರು ಇವರಿಗೆಲ್ಲ ಮಾರಕಾಸ್ತ್ರ ತೋರಿಸಿ ಬೆದರಿಸಿದ್ದಾರೆ. ಅಲ್ಲದೆ ಎಲ್ಲರನ್ನ ಕೂಡಿ ಹಾಕಿ ಮನೆಯಲ್ಲಿದ್ದ ಚಿನ್ನಾಭರಣ ಮತ್ತು ನಗದನ್ನು ದೋಚಿಕೊಂಡು ಪರಾರಿಯಾಗಿದ್ದಾರೆ.
ಓದಿ: ಇನ್‌ಸ್ಟಾಗ್ರಾಂನಲ್ಲಿ ಬಾಲಕಿಯ ಸ್ನೇಹ ಬೆಳೆಸಿದ ಅಪರಿಚಿತ: ವಿದ್ಯಾರ್ಥಿನಿಗೆ ಅಶ್ಲೀಲ ವಿಡಿಯೋ ಕಳಿಸಿ ವಿಕೃತಿ
ದರೋಡೆಕೋರರು ಹೋದ ಬಳಿಕ ಮನೆಯವರು ಧರ್ಮಸ್ಥಳ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಪೊಲೀಸ್ ಅಧಿಕಾರಿಗಳು ಘಟನೆ ನಡೆದ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ದರೋಡೆಕೋರರು ಪರಾರಿಯಾಗಬಹುದಾದ ಎಲ್ಲಾ ರಸ್ತೆಗಳಲ್ಲಿ ನಾಕಾಬಂದಿ ಹಾಕಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.