ಮಂಗಳೂರು: ಕಿತ್ತಳೆ ಹಣ್ಣು ಮಾರುವವರು ಬಹಳಷ್ಟು ಮಂದಿ ನಮಗೆ ಕಾಣಸಿಗುತ್ತಾರೆ. ಆದರೆ ಕಿತ್ತಳೆ ಹಣ್ಣು ಮಾರಿ ಬಂದ ಹಣದಲ್ಲಿ, ಒಂದು ಶಾಲೆ ನಿರ್ಮಾಣ ಮಾಡಬೇಕೆನ್ನೋದು ಬಹಳ ದೊಡ್ಡ ಗುಣ. ಆ ಕಿತ್ತಳೆ ಹಣ್ಣು ಮಾರುವವನನ್ನು, ಚಹಾ ಮಾರುವವನು ಗುರುತಿಸಿ ಪದ್ಮಶ್ರೀ ಪ್ರಶಸ್ತಿ ನೀಡಿರೋದು ನಿಜವಾಗಿಯೂ ಶ್ಲಾಘನೀಯ ಎಂದು ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು.
ಸಚಿವನಾಗಿ ಆರು ತಿಂಗಳ ಅವಧಿಯಲ್ಲೇ ಅತ್ಯಂತ ಮಹತ್ವದ ದಿನ. ಅನೇಕ ಶಾಲೆಗಳನ್ನು, ವ್ಯಕ್ತಿಗಳನ್ನು, ಸಂತರನ್ನು ಭೇಟಿ ಮಾಡಿದ್ದೇನೆ. ಆದರೆ ಮೊದಲ ಬಾರಿಗೆ ಅಕ್ಷರ ಸಂತನನ್ನು ಭೇಟಿ ಮಾಡಿರುವೆ. ಶಾಲೆಗಳನ್ನು ಕಟ್ಟಿ ವ್ಯವಹಾರ ಮಾಡಿರೋರು ತುಂಬಾ ಜನರಿದ್ದಾರೆ. ಆದರೆ ಓರ್ವ ತನ್ನ ಹಳ್ಳಿಯ ಮಕ್ಕಳಿಗೋಸ್ಕರ ಒಂದು ಶಾಲೆಯನ್ನು ಕಟ್ಟಿ ನಿಲ್ಲಿಸಿರುವ ಅಕ್ಷರ ಸಂತ ಹರೇಕಳ ಹಾಜಬ್ಬರಿಗೆ ಕರ್ನಾಟಕ ಜನತೆಯ ಪರವಾಗಿ ನಮಸ್ಕಾರ ಮಾಡಲು ಬಂದಿರುವೆ ಎಂದು ಸಚಿವ ಸುರೇಶ್ ಕುಮಾರ್ ಹೇಳಿದರು.
ಹಾಜಬ್ಬ ಅವರು ಒಂದಷ್ಟು ಮನವಿ ನೀಡಿದ್ದಾರೆ. ಅದನ್ನು ನಾನು ಗಂಭೀರವಾಗಿ ಪರಿಗಣಿಸುತ್ತೇನೆ. ಶಾಲೆಯನ್ನು ಪಿಯುಸಿ ಮಟ್ಟಕ್ಕೆ ಏರಿಸುವ ಬಗ್ಗೆ, ಕಾಂಪೌಂಡ್ ನಿರ್ಮಾಣ, ಶಾಲೆಯ ಮಕ್ಕಳ ಸಂಖ್ಯೆ ಹೆಚ್ಚು ಮಾಡುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಹೇಳಿದರು.
ಈ ಸಂದರ್ಭ ಮಾಜಿ ಸಚಿವ ಯು.ಟಿ.ಖಾದರ್, ಮಾಜಿ ಸೈನಿಕ ಕ್ಯಾ.ಗಣೇಶ್ ಕಾರ್ಣಿಕ್, ಅಧಿಕಾರಿಗಳು, ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.