ಅಹಮದಾಬಾದ್, ಗುಜರಾತ್: ಅಮೆರಿಕದ ಇಂಧನ ಭದ್ರತೆ ಮತ್ತು ಮೂಲಸೌಕರ್ಯ ಯೋಜನೆಗಳಲ್ಲಿ ಅದಾನಿ ಗ್ರೂಪ್ 10 ಬಿಲಿಯನ್ ಡಾಲರ್ ಹೂಡಿಕೆ ಮಾಡಲಿದೆ ಎಂದು ಕಂಪನಿ ಬುಧವಾರ ಪ್ರಕಟಿಸಿದೆ. ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಮಾಹಿತಿ ನೀಡಿದ ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ, ಅಮೆರಿಕದಲ್ಲಿನ ಹೂಡಿಕೆಗಳಿಂದ 15,000 ಉದ್ಯೋಗವಕಾಶಗಳು ಸೃಷ್ಟಿಯಾಗಲಿವೆ ಎಂದು ಪ್ರತಿಪಾದಿಸಿದರು.
"ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್ ನಡುವಿನ ಸಹಭಾಗಿತ್ವವು ಬಲವಾಗುತ್ತಿರುವ ಮಧ್ಯೆ ಅದಾನಿ ಗ್ರೂಪ್ ತನ್ನ ಜಾಗತಿಕ ಪರಿಣತಿ ಬಳಸಿಕೊಳ್ಳಲು ಮತ್ತು ಅಮೆರಿಕ ಇಂಧನ ಭದ್ರತೆ ಮತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯ ಯೋಜನೆಗಳಲ್ಲಿ 10 ಬಿಲಿಯನ್ ಡಾಲರ್ ಹೂಡಿಕೆ ಮಾಡಲು ಬದ್ಧವಾಗಿದೆ. ಈ ಮೂಲಕ 15,000 ಉದ್ಯೋಗಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಲಾಗಿದೆ" ಅವರು ಎಕ್ಸ್ನಲ್ಲಿ ಬರೆದಿದ್ದಾರೆ.
Congratulations to @realDonaldTrump. As the partnership between India and the United States deepens, the Adani Group is committed to leveraging its global expertise and invest $10 billion in US energy security and resilient infrastructure projects, aiming to create up to 15,000… pic.twitter.com/X9wZm4BV2u
— Gautam Adani (@gautam_adani) November 13, 2024
ತಮ್ಮ ಪೋಸ್ಟ್ಗೆ ಯುಎಸ್ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಟ್ಯಾಗ್ ಮಾಡಿರುವ ಗೌತಮ್ ಅದಾನಿ, ಇತ್ತೀಚಿನ ಅಧ್ಯಕ್ಷೀಯ ಚುನಾವಣೆಯಲ್ಲಿನ ಗೆಲುವಿಗಾಗಿ ಅವರನ್ನು ಅಭಿನಂದಿಸಿದ್ದಾರೆ. ನವೆಂಬರ್ 6 ರಂದು ಕೂಡ ಗೌತಮ್ ಅದಾನಿ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಎರಡನೇ ಅವಧಿಗೆ ಜಯ ಗಳಿಸಿದ್ದಕ್ಕಾಗಿ ಟ್ರಂಪ್ ಅವರನ್ನು ಅಭಿನಂದಿಸಿದ್ದರು. ಟ್ರಂಪ್ ದೃಢತೆ, ಧೈರ್ಯ, ದೃಢನಿಶ್ಚಯ ಮತ್ತು ಧೈರ್ಯವಂತ ವ್ಯಕ್ತಿಯಾಗಿದ್ದಾರೆ ಎಂದು ಅವರು ಹೇಳಿದ್ದರು.
ಡೊನಾಲ್ಡ್ ಟ್ರಂಪ್ ಗುಣಗಾನ ಮಾಡಿದ ಅದಾನಿ: "ದೃಢತೆ, ಅಚಲ ಧೈರ್ಯ, ಪಟ್ಟುಬಿಡದ ದೃಢನಿಶ್ಚಯ ಮತ್ತು ತನ್ನ ನಂಬಿಕೆಗಳಿಗೆ ನಿಷ್ಠರಾಗಿ ಉಳಿಯುವ ಧೈರ್ಯದ ಸಾಕಾರರೂಪವಾಗಿ ನಿಂತಿರುವ ಒಬ್ಬ ವ್ಯಕ್ತಿ ಭೂಮಿಯ ಮೇಲೆ ಇದ್ದರೆ, ಅದು ಡೊನಾಲ್ಡ್ ಟ್ರಂಪ್" ಎಂದು ಅದಾನಿ ಎಕ್ಸ್ ಪೋಸ್ಟ್ನಲ್ಲಿ ಹೇಳಿದ್ದರು. ಅಮೆರಿಕದ ಪ್ರಜಾಪ್ರಭುತ್ವವು ತನ್ನ ಜನರನ್ನು ಸಬಲೀಕರಣಗೊಳಿಸುವುದನ್ನು ಮತ್ತು ರಾಷ್ಟ್ರದ ಸ್ಥಾಪಕ ತತ್ವಗಳನ್ನು ಎತ್ತಿ ಹಿಡಿಯುವುದನ್ನು ನೋಡಲು ಖುಷಿಯಾಗುತ್ತದೆ. 47ನೇ ಅಧ್ಯಕ್ಷರಾಗಿ ಚುನಾಯಿತರಾದ ಡೊನಾಲ್ಡ್ ಟ್ರಂಪ್ ಅವರಿಗೆ ಅಭಿನಂದನೆಗಳು ಎಂದು ಅವರು ಹೇಳಿದರು.
ಅಹಮದಾಬಾದ್ನಲ್ಲಿ ಪ್ರಧಾನ ಕಚೇರಿ ಹೊಂದಿರುವ ಅದಾನಿ ಗ್ರೂಪ್ ಸಾರಿಗೆ ಲಾಜಿಸ್ಟಿಕ್ಸ್ ಮತ್ತು ನವೀಕರಿಸಬಹುದಾದ ಇಂಧನ ಕ್ಷೇತ್ರಗಳಲ್ಲಿ ದೊಡ್ಡ ಕಂಪನಿಯಾಗಿ ಬೆಳೆಯುತ್ತಿದೆ. 1988 ರಲ್ಲಿ ಬಿಲಿಯನೇರ್ ಗೌತಮ್ ಅದಾನಿ ಸ್ಥಾಪಿಸಿದ ಬಹುರಾಷ್ಟ್ರೀಯ ಸಂಸ್ಥೆ ಭಾರತದಲ್ಲಿ ದೊಡ್ಡ ಪ್ರಮಾಣದ ಮೂಲಸೌಕರ್ಯ ಅಭಿವೃದ್ಧಿ ಒದಗಿಸುವಲ್ಲಿ ಪರಿಣತಿ ಹೊಂದಿದೆ. ಅಲ್ಲದೇ ಕಂಪನಿಯು 70 ದೇಶಗಳಲ್ಲಿ ಉಪಸ್ಥಿತಿ ಹೊಂದಿದೆ.
ಇದನ್ನೂ ಓದಿ : 50 ಲಕ್ಷಕ್ಕಿಂತ ಅಧಿಕ ಆದಾಯದ ಐಟಿಆರ್ ಸಲ್ಲಿಕೆ ದಶಕದಲ್ಲಿ 5 ಪಟ್ಟು ಹೆಚ್ಚಳ