ಸುಳ್ಯ (ದಕ್ಷಿಣಕನ್ನಡ): ಎರಡು ವರ್ಷಗಳ ಹಿಂದೆ ಪುತ್ತೂರು ತಾಲೂಕಿನ ಸಂಪ್ಯ ಗಣೇಶೋತ್ಸವದಲ್ಲಿ ನಡೆದ ಹಿಂದೂ ಕಾರ್ಯಕರ್ತ ಕಾರ್ತಿಕ್ ಮೆರ್ಲ ಕೊಲೆ ಪ್ರಕರಣದ ಆರೋಪಿಯನ್ನು ಹಾಡಹಗಲೇ ಬರ್ಬರವಾಗಿ ಕೊಲೆ ಮಾಡಲಾಗಿದೆ. ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಪೆರ್ಲಂಪಾಡಿ ಎಂಬಲ್ಲಿ ಶನಿವಾರ ಘಟನೆ ನಡೆದಿದೆ.
ಪುತ್ತೂರು ತಾಲೂಕಿನ ಅರ್ಯಾಪು ನಿವಾಸಿ ಚರಣ್ರಾಜ್ (28) ಎಂಬಾತನೆ ಕೊಲೆಗೀಡಾದ ವ್ಯಕ್ತಿ. ಪುತ್ತೂರಿನ ಹಿಂದೂ ಸಂಘಟನೆ ಕಾರ್ತಿಕ್ ಮೇರ್ಲ ಹತ್ಯೆಯ ಮೂವರು ಆರೋಪಿಗಳಲ್ಲಿ ಈತನೂ ಒಬ್ಬನಾಗಿದ್ದಾನೆ. ಬೈಕ್ನಲ್ಲಿ ಬಂದ ದುಷ್ಕರ್ಮಿಗಳ ತಂಡವೊಂದು ಈತನನ್ನು ಮಚ್ಚಿನಿಂದ ಕೊಚ್ಚಿ ಹತ್ಯೆಗೈದು ಪರಾರಿಯಾಗಿದೆ.
ಚರಣ್ ಪತ್ನಿ ಪೆರ್ಲಂಪಾಡಿಯವರಾಗಿದ್ದು, ಅಲ್ಲಿಯೇ ಆತ ಮೆಡಿಕಲ್ ಶಾಪ್ ತೆರೆಯಲು ಸಿದ್ಧತೆ ನಡೆಸಿದ್ದ. ಇದರ ಶುಭಾರಂಭ ನಡೆಯುವುದಿತ್ತು ಎನ್ನಲಾಗ್ತಿದೆ. ಹೀಗಾಗಿ ಅಂಗಡಿಗೆ ಬೇಕಾದ ಸಾಮಾನು ಸಲಕರಣೆ ಜೋಡಿಸುವ ಕಾರ್ಯದಲ್ಲಿ ಚರಣ್ ತೊಡಗಿದ್ದ. ಎರಡು ಬೈಕಿನಲ್ಲಿ ಬಂದ ಮೂವರು ದುಷ್ಕರ್ಮಿಗಳು ಕೃತ್ಯ ಎಸಗಿದ್ದು, ರಕ್ತದ ಮಡುವಿನಲ್ಲೇ ಪ್ರಾಣಬಿಟ್ಟಿದ್ದಾನೆ.
2019ರ ಸೆ. 4ರ ರಾತ್ರಿ ಗಣೇಶೋತ್ಸವದ ವೇಳೆ ಕಾರ್ತಿಕ್ ಮೇರ್ಲ ಕೊಲೆ ನಡೆದಿತ್ತು. ಈ ಪ್ರಕರಣದಲ್ಲಿ ಸಹೋದರರಾದ ಕಿರಣ್ ಮತ್ತು ಚರಣ್ ಹಾಗೂ ಮಂಗಳೂರು ನಿವಾಸಿ ಪ್ರಿತೇಶ್ ಎಂಬುವರನ್ನು ಪೊಲೀಸರು ಬಂಧಿಸಿದ್ದರು. ಚರಣ್ ಹಾಗೂ ಕಿರಣ್ ಎರಡು ವರ್ಷಗಳ ಹಿಂದೆ ಜಾಮೀನಿನ ಮೇಲೆ ಬಿಡುಗಡೆ ಆಗಿದ್ದರು.
ಇದನ್ನೂ ಓದಿ: ಶಿವಮೊಗ್ಗ: ಖಾಸಗಿ ವಿಡಿಯೋ ವೈರಲ್ ಮಾಡುವುದಾಗಿ ಪತ್ನಿಗೆ ಬೆದರಿಕೆ ಹಾಕಿದ ಪತಿ!