ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಅಧೀನದಲ್ಲಿರುವ ನಗರದ ಹಂಪನಕಟ್ಟೆಯ ವಿವಿ ಕಾಲೇಜಿನಲ್ಲಿ ನಡೆದ ಹಿಜಾಬ್ ವಿವಾದದ ಹಿನ್ನೆಲೆಯಲ್ಲಿ ಪ್ರಾಂಶುಪಾಲರು ಜಾರಿ ಮಾಡಿದ್ದ ಶಿಸ್ತು ಕ್ರಮದ ನೋಟಿಸ್ಗೆ ಇಬ್ಬರು ವಿದ್ಯಾರ್ಥಿನಿಯರು ಉತ್ತರ ನೀಡಿದ್ದಾರೆ.
ಹಿಜಾಬ್ ವಿವಾದದ ಬಳಿಕ ಮೂವರು ವಿದ್ಯಾರ್ಥಿನಿಯರು ಮಂಗಳೂರು ವಿವಿಯ ಸಮನ್ವಯ ಸಮಿತಿಯ ಜೊತೆಗೆ ಮಾಧ್ಯಮಗೋಷ್ಟಿ ನಡೆಸಿದ್ದರು. ಈ ಮೂವರು ವಿದ್ಯಾರ್ಥಿನಿಯರಿಗೆ ಕಾಲೇಜಿನ ಪ್ರಾಂಶುಪಾಲೆ ಅನುಸೂಯ ಮೂರು ದಿನಗಳೊಳಗೆ ಉತ್ತರಿಸುವಂತೆ ನೋಟಿಸ್ ಜಾರಿ ಮಾಡಿದ್ದರು.
ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗೆ ಶಿರವಸ್ತ್ರ ಧರಿಸಿ ತರಗತಿಗಳಿಗೆ ಹಾಜರಾಗುವಂತಿಲ್ಲ ಎಂಬ ಆದೇಶವಿರುತ್ತದೆ. ಈ ಬಗ್ಗೆ ವಿಶ್ವವಿದ್ಯಾಲಯದಿಂದ ಮಾರ್ಗಸೂಚಿ ಹಾಗೂ ಹೈಕೋರ್ಟ್ನ ಆದೇಶವನ್ನು ಎಲ್ಲ ವಿದ್ಯಾರ್ಥಿ/ ವಿದ್ಯಾರ್ಥಿನಿಯರು ಕಟ್ಟುನಿಟ್ಟಾಗಿ ಪಾಲಿಸುವಂತೆ ತಿಳಿಸಲಾಗಿದೆ. ಈ ಕಾಲೇಜಿನಲ್ಲಿ ಸುಮಾರು 1,600 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಕೇವಲ ಬೆರಳೆಣಿಕೆಯ ವಿದ್ಯಾರ್ಥಿಗಳು ಕಾಲೇಜಿಗೆ ಬಂದು ತರಗತಿಗಳಿಗೆ ಹಾಜರಾಗದೆ ಕಾಲೇಜಿನ ಆವರಣದಲ್ಲಿ ಆತಂಕ, ಶಾಂತಿಭಂಗ ಮತ್ತು ಅಶಿಸ್ತು ಸೃಷ್ಟಿ ಮಾಡುತ್ತಿರುವುದು ಕಂಡುಬಂದಿರುತ್ತದೆ ಎಂದು ನೋಟಿಸ್ ಜಾರಿ ಮಾಡಲಾಗಿತ್ತು.
ಮಾತ್ರವಲ್ಲದೆ ನೀವು ಬಾಹ್ಯಶಕ್ತಿಗಳ ಜೊತೆ ಸೇರಿಕೊಂಡು ಮಾಧ್ಯಮಗೋಷ್ಟಿ ನಡೆಸಿ ಕಾಲೇಜಿನ ವಿರುದ್ಧ, ಪ್ರಾಂಶುಪಾಲರ ವಿರುದ್ಧ ಕೆಲವೊಂದು ಹೇಳಿಕೆ ನೀಡಿ ಕಾಲೇಜಿನ ಘನತೆಗೆ ಧಕ್ಕೆ ಉಂಟು ಮಾಡಿರುವುದನ್ನು ಗಮನಿಸಲಾಗಿದೆ. ಈ ರೀತಿಯ ವರ್ತನೆಯ ಬಗ್ಗೆ ನಿಮ್ಮ ಮೇಲೆ ಯಾಕೆ ಶಿಸ್ತು ಕ್ರಮ ಕೈಗೊಳ್ಳಬಾರದು ಎನ್ನುವ ಬಗ್ಗೆ ಸಮಜಾಯಿಷಿಯನ್ನು ಈ ಪತ್ರ ತಲುಪಿದ ಮೂರು ದಿನಗಳೊಳಗೆ ಪ್ರಾಂಶುಪಾಲರಿಗೆ ನೀಡುವಂತೆ ಸೂಚಿಸಲಾಗಿದೆ ಎಂದು ನೋಟಿಸ್ನಲ್ಲಿ ತಿಳಿಸಲಾಗಿತ್ತು.
ಈ ನೋಟಿಸ್ಗೆ ಶನಿವಾರ ಇಬ್ಬರು ವಿದ್ಯಾರ್ಥಿನಿಯರು ಉತ್ತರ ನೀಡಿದ್ದು, ಮತ್ತೋರ್ವ ವಿದ್ಯಾರ್ಥಿನಿ ಯಾವುದೇ ಉತ್ತರ ನೀಡಿಲ್ಲ. ಕಾಲೇಜಿನಲ್ಲಿ ಇದೀಗ ಬಿ.ಕಾಂ ಪರೀಕ್ಷೆಯ ಉತ್ತರ ಪತ್ರಿಕೆಯ ಮೌಲ್ಯಮಾಪನ ನಡೆಯುತ್ತಿರುವುದರಿಂದ ಪದವಿ ವಿದ್ಯಾರ್ಥಿಗಳಿಗೆ 15 ದಿನಗಳ ಕಾಲ ಆನ್ಲೈನ್ ತರಗತಿಗಳು ನಡೆಯುತ್ತಿವೆ. ಕೇವಲ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮಾತ್ರ ಆಫ್ಲೈನ್ ತರಗತಿಗಳು ನಡೆಯುತ್ತಿವೆ.
ಇದನ್ನೂ ಓದಿ: ತಾಯಿಗೆ ಬರ್ತ್ಡೇ ವಿಶ್ ತಿಳಿಸಲು ಮೊಬೈಲ್ ಕೊಡಲಿಲ್ಲವೆಂದು ನೊಂದ ವಿದ್ಯಾರ್ಥಿ ಆತ್ಮಹತ್ಯೆ!