ಪುತ್ತೂರು : ಕಳೆದ ನಾಲ್ಕೈದು ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಪುತ್ತೂರು-ಪೆರಿಗೇರಿ-ಸುಳ್ಯಪದವು ರಸ್ತೆ ಮತ್ತು ಪುತ್ತೂರು ಕಾವು ಈಶ್ವರಮಂಗಲ ರಸ್ತೆಗೆ ಸಂಪರ್ಕ ಕಲ್ಪಿಸುವ ಪಟ್ಟೆ- ಗೆಜ್ಜೆಗರಿ-ಈಶ್ವರಮಂಗಲ ರಸ್ತೆ ಇಂದು ಸಂಜೆ ಬಿರುಕು ಬಿಟ್ಟು ಅಪಾಯದ ಸ್ಥಿತಿಗೆ ತಲುಪಿದೆ.
ಗೆಜ್ಜೆಗಿರಿ ಕ್ಷೆತ್ರದ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಗೆಜ್ಜೆಗಿರಿ ಕ್ಷೆತ್ರಕ್ಕೆ ಭಕ್ತರು ಬರಲು ಅನುಕೂಲವಗುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಪಟ್ಟೆ-ಗೆಜ್ಜೆಗಿರಿ ಸಂಪರ್ಕ ರಸ್ತೆಯ ಅಭಿವೃದ್ಧಿಗಾಗಿ ರೂ.1 ಕೋಟಿ ಅನುದಾನ ಒದಗಿಸಿದ್ದರು. ಬ್ರಹ್ಮಕಲಶೋತ್ಸವದ ಹಿನ್ನೆಲೆ ತುರಾತುರಿಯಾಗಿ ಈ ಕಾಂಕ್ರೀಟ್ ರಸ್ತೆ ಕಾಮಗಾರಿಯನ್ನು ನಿರ್ವಹಿಸಲಾಗಿತ್ತು. ಇದೀಗ ಪಟ್ಟೆ ಸಮೀಪ ಹೊಳೆ ಪಕ್ಕದ ತಿರುವು ಭಾಗದಲ್ಲಿ ರಸ್ತೆ ಭಾಗ ಬಿರುಕು ಬಿಟ್ಟಿದ್ದು, 10 ಮೀಟರ್ನಷ್ಟು ಉದ್ದದಲ್ಲಿ ಬೃಹತ್ ಬಿರುಕು ಕಾಣಿಸಿದೆ.
ಈ ರಸ್ತೆ ಭಾಗವೇ ಕುಸಿದು ಹೊಳೆ ಪಾಲಾಗುವ ಅಪಾಯದ ಸಾಧ್ಯತೆ ಎದುರಾಗಿದೆ. ಹೊಳೆ ಬದಿಯ ಕಾಲಾಂಶ ರಸ್ತೆಯು ಹೊಳೆಯ ಬದಿಗೆ ವಾಲಿ ನಿಂತಿದೆ. ಅಲ್ಲದೆ ಒಂದು ಬದಿ ಕುಸಿದು ಹೋಗಿದೆ. ಸ್ಥಳೀಯರು ನೀಡಿದ ಮಾಹಿತಿಯಂತೆ ಸಂಪ್ಯ ಠಾಣೆಯ ಎಸ್‌ಐ ಉದಯರವಿ ಮತ್ತು ಸಿಬ್ಬಂದಿ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದು, ಅಪಾಯದ ಹಿನ್ನೆಲೆ ಈ ರಸ್ತೆ ಸಂಚಾರವನ್ನು ನಿರ್ಬಂಧಿಸಿದ್ದಾರೆ. ಪಟ್ಟೆ-ಗೆಜ್ಜೆಗಿರಿ- ಈಶ್ವರಮಂಗಲ ರಸ್ತೆ ಸಂಚಾರ ಸ್ಥಗಿತಗೊಂಡಿದ್ದು, ಮಳೆ ನೀರು ರಸ್ತೆಯಲ್ಲೇ ಹರಿದು ಹೋದ ಪರಿಣಾಮವಾಗಿ ರಸ್ತೆ ಬಿರುಕು ಬಿಟ್ಟಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.