ದಕ್ಷಿಣಕನ್ನಡ: ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಕುಕ್ಕೆ ಸುಬ್ರಹ್ಮಣ್ಯ ಸ್ನಾನಘಟ್ಟ ಸಂಪೂರ್ಣ ಜಲಾವೃತವಾಗಿದೆ.
ನಿರಂತರ ಮಳೆಯಿಂದಾಗಿ ಕುಮಾರಧಾರ, ಗುಂಡ್ಯಹೊಳೆ, ನೇತ್ರಾವತಿ, ಪಯಸ್ವಿನಿ ನದಿಗಳು ತುಂಬಿ ಹರಿಯುತ್ತಿವೆ. ಇದರಿಂದಾಗಿ ಕುಕ್ಕೆ ಸುಬ್ರಹ್ಮಣ್ಯ ಸ್ನಾನಘಟ್ಟ ಜಲಾವೃತವಾಗಿದೆ. ಸ್ನಾನಘಟ್ಟ ಮುಳುಗಡೆಯಾಗಿದ್ದರಿಂದ ಕುಕ್ಕೆಗೆ ಆಗಮಿಸಿದ ಭಕ್ತಾದಿಗಳು ನದಿಯ ಮೇಲ್ಭಾಗದಲ್ಲಿಯೇ ತೀರ್ಥಸ್ನಾನ ಮಾಡುತ್ತಿದ್ದಾರೆ.
ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದ್ದು, ಹಲವೆಡೆ ತೋಟಗಳಿಗೂ ನೀರು ನುಗ್ಗಿದೆ. ಸುಳ್ಯ, ಸುಬ್ರಹ್ಮಣ್ಯ, ಕಡಬ, ನೆಲ್ಯಾಡಿ, ಕೊಲ್ಲಮೊಗ್ರು, ಕಲ್ಮಕಾರು,ಶೀರಾಡಿ, ಗುತ್ತಿಗಾರು, ಪಂಜ, ಬಳ್ಪ, ನಿಂತಿಕಲ್ ಮುಂತಾದ ಕಡೆಗಳಲ್ಲಿ ನಿರಂತರ ಮಳೆಗೆ ಸಣ್ಣಪುಟ್ಟ ನದಿಗಳು ಉಕ್ಕಿ ಹರಿಯುತ್ತಿವೆ.