ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಶುಕ್ರವಾರ ರಾತ್ರಿಯಿಂದ ಭಾರಿ ಮಳೆ ಸುರಿಯುತ್ತಿರುವುದರಿಂದ ಇಂದು ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಮಂಗಳೂರು ಮಹಾನಗರ ಪಾಲಿಕೆ, ಉಳ್ಳಾಲ, ಮುಲ್ಕಿ, ಮೂಡಬಿದಿರೆ ಮತ್ತು ಬಂಟ್ವಾಳ ತಾಲೂಕುಗಳ ವ್ಯಾಪ್ತಿಯಲ್ಲಿ ರಜೆ ನೀಡಲಾಗಿದೆ.
ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಮಂಗಳೂರು ಮಹಾನಗರ ಪಾಲಿಕೆ, ಉಳ್ಳಾಲ, ಮುಲ್ಕಿ, ಮೂಡಬಿದಿರೆ ಮತ್ತು ಬಂಟ್ವಾಳ ತಾಲೂಕಿನ ಅಂಗನವಾಡಿ ಕೇಂದ್ರ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಪುತ್ತೂರು ಉಪವಿಭಾಗದ ಪುತ್ತೂರು, ಸುಳ್ಯ, ಬೆಳ್ತಂಗಡಿ, ಕಡಬ ವ್ಯಾಪ್ತಿಯ ತಹಶೀಲ್ದಾರ್ ಅವರು ಅಲ್ಲಿಯ ಪರಿಸ್ಥಿತಿ ಅವಲೋಕಿಸಿ ರಜೆ ನೀಡುವಂತೆ ಸೂಚಿಸಲಾಗಿದೆ.
ಮಂಗಳೂರಲ್ಲಿ ಮಳೆ ಅವಾಂತರ: ಮಳೆಯಿಂದ ನಗರದಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ನಗರದ ಹಂಪನಕಟ್ಟೆಯಲ್ಲಿರುವ ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣಕ್ಕೆ ಆಗಮಿಸುವ ದ್ವಾರದ ಬಳಿ ನೀರು ನಿಂತಿದೆ. ವಾಹನಗಳು ಬಂದು ಪ್ರಯಾಣಿಕರನ್ನು ರೈಲ್ವೆ ನಿಲ್ದಾಣದೊಳಗೆ ಇಳಿಸುವ ಮತ್ತು ಹತ್ತುವ ಜಾಗದಲ್ಲಿ ಭಾರಿ ಪ್ರಮಾಣದಲ್ಲಿ ನೀರು ತುಂಬಿದೆ.
ಪಂಪ್ ವೆಲ್ ಫ್ಲೈ ಓವರ್ ಬಳಿಯೂ ಭಾರಿ ಮಳೆಗೆ ಕೆಳಭಾಗದ ರಸ್ತೆ ಜಲಾವೃತವಾಗಿದೆ. ನಗರಕ್ಕೆ ಸಂಪರ್ಕಿಸುವ ಮಧ್ಯೆ ರಸ್ತೆಯಲ್ಲಿ ನೀರು ತುಂಬಿದೆ. ವಾಹನ ಸವಾರರು ನಗರಕ್ಕೆ ಬರಲು ಸಮಸ್ಯೆಯಾಗಿ ಟ್ರಾಫಿಕ್ ಜಾಮ್ ಉಂಟಾಗಿದೆ. ಪಾಂಡೇಶ್ವರದ ಶಿವನಗರ, ಕರಂಗಲ್ಪಾಡಿಯಲ್ಲಿ ತಗ್ಗುಪ್ರದೇಶದಲ್ಲಿರುವ ಹಲವು ಮನೆಗಳಿಗೆ ನೀರು ನುಗ್ಗಿದೆ.
ತುರ್ತು ಸಂದರ್ಭದಲ್ಲಿ ಸಂಪರ್ಕಿಸಬೇಕಾದ ಅಗ್ನಿಶಾಮಕ ದಳದ ಪೋನ್ ಸಂಪರ್ಕ ಭಾರಿ ಮಳೆಗೆ ಕಡಿತಗೊಂಡಿದೆ. ಪೋನ್ ಔಟ್ ಆಪ್ ಆರ್ಡರ್ ಆಗಿರುವುದರಿಂದ ಅಗತ್ಯ ಸೇವೆಗೆ ಜನರು ಅಗ್ನಿಶಾಮಕ ದಳದ ಅಧಿಕಾರಿಗಳ ಮೊಬೈಲ್ ಸಂಖ್ಯೆ 9740109665, 9448568101, 8217099672 ಸಂಪರ್ಕಿಸುವಂತೆ ಸೂಚಿಸಲಾಗಿದೆ.
ಮಿತ್ತಕೋಡಿ ರಸ್ತೆ ಬಂದ್: ಬೋಳಿಯಾರ್ನಿಂದ ಕಂಬಳಪದವು ರಸ್ತೆ ಸಂಪರ್ಕಿಸುವ ಅರ್ಕಾನ ಕ್ರಾಸ್ ಬಳಿ ಭಾರಿ ಮಳೆಗೆ ಗುಡ್ಡ ಕುಸಿತವಾಗಿದೆ. ಈ ಕಾರಣದಿಂದ ಮಿತ್ತಕೋಡಿ ರಸ್ತೆ ಬಂದ್ ಆಗಿದೆ.
ಇದನ್ನೂ ಓದಿ: ಸರಣಿ ಹತ್ಯೆ ಹಿನ್ನೆಲೆ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿಂದು ಶಾಂತಿ ಸಭೆ ಆಯೋಜನೆ