ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರದಿಂದ ಆರಂಭವಾದ ವ್ಯಾಪಕ ಗಾಳಿಸಹಿತ ಮಳೆ ಇಂದೂ ಕೂಡ ಮುಂದುವರೆದಿದೆ. ಭಾರಿ ಮಳೆಯಿಂದ ಜಿಲ್ಲೆಯಲ್ಲಿ 20ಕ್ಕೂ ಅಧಿಕ ಮನೆಗಳಿಗೆ ಹಾನಿ ಆಗಿದ್ದು, ಸುಮಾರು 200ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿವೆ. ಹವಾಮಾನ ಇಲಾಖೆ ಇಂದು ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಿದ್ದು, ಅಂಗನವಾಡಿ, ಶಾಲೆ, ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಿಗೆ ರಜೆ ನೀಡಲಾಗಿದೆ.
ಕಾಳಜಿ ಕೇಂದ್ರಕ್ಕೆ ಜನರ ಸ್ಥಳಾಂತರ: ಮಳೆಯ ಅಬ್ಬರವು ನಗರ ಪ್ರದೇಶಕ್ಕಿಂತ ಗ್ರಾಮೀಣ ಭಾಗದಲ್ಲಿ ತೀವ್ರವಾಗಿದೆ. ನದಿ, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಜಿಲ್ಲೆಯಲ್ಲಿ 5 ಕಾಳಜಿ ಕೇಂದ್ರದಲ್ಲಿ 1 ಕೇಂದ್ರ ಕಾರ್ಯಾಚರಣೆಯಲ್ಲಿದ್ದು, 37 ಮಂದಿಯನ್ನು ಅಲ್ಲಿಗೆ ಸ್ಥಳಾಂತರ ಮಾಡಲಾಗಿದೆ. ಕಡಬ ತಾಲೂಕಿನಲ್ಲಿ 7 ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, ಉಳಿದಂತೆ ಪುತ್ತೂರು, ಮೂಲ್ಕಿ ಭಾಗದಲ್ಲಿ ತಲಾ ಮೂರು ಮನೆಗಳಿಗೆ ಹಾನಿಯಾಗಿದೆ. ಬಂಟ್ವಾಳದಲ್ಲಿ 2 ಮನೆಗಳು ಸಂಪೂರ್ಣ ಹಾನಿಗೊಳಗಾಗಿದ್ದು, ಜಿಲ್ಲೆಯಲ್ಲಿ 24 ಗಂಟೆಯಲ್ಲಿ 20 ಮನೆಗಳಿಗೆ ಹಾನಿಯಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ. ಸುಮಾರು 200ಕ್ಕೂ ಅಧಿಕ ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. 6 ವಿದ್ಯುತ್ ಟ್ರಾನ್ಸ್ಫಾರ್ಮರ್ಗಳು ಹಾನಿಗೊಳಗಾಗಿದೆ ಎಂದು ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.
ಮಂಗಳೂರಿನ ಅತ್ತಾವರ ಸರ್ಕಲ್ ಬಳಿ ಕಾರಿನ ಚಕ್ರವೊಂದು ತೆರೆದ ಮ್ಯಾನ್ ಹೋಲ್ನಲ್ಲಿ ಸಿಲುಕಿ ಸಮಸ್ಯೆ ಉಂಟಾಗಿತ್ತು. ಸ್ಥಳೀಯರ ನೆರವಿನಿಂದ ಕಾರನ್ನು ಮೇಲಕ್ಕೆತ್ತಲಾಗಿದೆ. ವಾಮಂಜೂರು ಮ.ನ.ಪಾ ತಿರುವೈಲು ವಾರ್ಡ್‌ನ ಕೆಲರೈಕೋಡಿ 2ನೇ ಬ್ಲಾಕ್ ಜಯಂತಿ ದಾಮೋದರ ಪೂಜಾರಿ ಎಂಬವರ ಮನೆಯ ಎದುರು ಬೃಹತ್ ಪ್ರಮಾಣದಲ್ಲಿ ಗುಡ್ಡ ಕುಸಿದಿದ್ದು, ಮನೆಗೆ ತೀವ್ರ ಹಾನಿಯುಂಟಾಗಿದೆ. ಉಳಾಯಿಬೆಟ್ಟು ಪಂಚಾಯಿತಿ ವ್ಯಾಪ್ತಿಯ ಮೂಡುಜಪ್ಪು ವಾರ್ಡ್ ಗುಲಾಬ್ ಶಾ ಎಸ್.ಕೆ. ಎಂಬವರ ಮನೆಗೆ ಹತ್ತಿರದ ಗುಡ್ಡ ಕುಸಿದು ಬಂಡೆಗಳು ಉರುಳಿ ಮನೆಗೆ ಭಾರಿ ನಷ್ಟವಾಗಿದೆ. ಜಯಂತಿ ಎಂಬುವರ ಮನೆಯಂಗಳಕ್ಕೆ ಗುಡ್ಡದಿಂದ ರಾಶಿಗಟ್ಟಲೆ ಮಣ್ಣು ಕುಸಿದಿದೆ. ಗುಡ್ಡದ ಮೇಲ್ಬಾಗದ ಅಂಚಿನಲ್ಲಿರುವ ಶಂಭು ಪೂಜಾರಿ ಮತ್ತು ಬಾಬು ಶಕೀಲಾ ಎಂಬುವರ ಮನೆಗಳಿಗೂ ಅಪಾಯ ಎದುರಾಗಿದೆ. ಗುಡ್ಡ ಜರಿದ ಪ್ರದೇಶದಲ್ಲಿ ಉದ್ದಗಲಕ್ಕೂ ಟಾರ್ಪಲ್ ಹಾಸಲಾಗಿದ್ದು, ಸತತ ಮಳೆಗೆ ಗುಡ್ಡದಿಂದ ನೀರು ಪ್ರವಾಹದಂತೆ ಮನೆಯತ್ತ ಹರಿಯುತ್ತಿದೆ.
2 ತಿಂಗಳ ಹಿಂದಷ್ಟೇ ನಿರ್ಮಿಸಲಾದ ಉಳಾಯಿಬೆಟ್ಟಿನ ಗುಲಾಬ್ ಶಾ ಅವರ ಮನೆಯ ಹಿಂಭಾಗದಲ್ಲಿ ಬೃಹತ್ ಗುಡ್ಡ ಕುಸಿದು ಕೆಲ ಬಂಡೆಗಳು ಉರುಳಿ ಮನೆಗೆ ಹಾನಿ ಆಗಿದೆ. ಮನೆಯಲ್ಲಿ ಸುಮಾರು 15 ಮಂದಿ ಇದ್ದು, ಅವರೆಲ್ಲ ಬೇರೆಡೆಗೆ ಸ್ಥಳಾಂತರಗೊಂಡಿದ್ದಾರೆ. ಮನೆಯೊಳಗೆ ಕೆಸರು ಮಣ್ಣು ತುಂಬಿಕೊಂಡಿದೆ. ಗುಡ್ಡ ಕುಸಿದು ಅಪಾಯದಲ್ಲಿರುವ ಜಯಂತಿ ಮತ್ತು ಗುಲಾಬ್ ಶಾ ಅವರ ಮನೆಗಳಿಗೆ ಗುರುಪುರ ನಾಡ ಕಚೇರಿ ಉಪ ತಹಸೀಲ್ದಾರ್ ಶಿವಪ್ರಸಾದ್, ಗ್ರಾಮ ಸಹಾಯಕಿ ರೇವತಿ, ಗ್ರಾಮ ಕರಣಿಕ (ವಿಎ) ಮೆಹಬೂಬ್ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: Karnataka Rain update: ಕಲಬುರಗಿಗೆ ಭಾರಿ ಮಳೆ ಮುನ್ಸೂಚನೆ, ರೆಡ್ ಅಲರ್ಟ್: ಇಂದು ಎಲ್ಲೆಲ್ಲಿ ಶಾಲೆಗೆ ರಜೆ ಗೊತ್ತೇ?