ಮಂಗಳೂರು (ದ.ಕ): ರಾಷ್ಟ್ರೀಯ ಹೆದ್ದಾರಿ 169ರ ಕುಲಶೇಖರ-ಮೂಡುಬಿದಿರೆ ರಸ್ತೆಯ ಗುರುಪುರದಲ್ಲಿರುವ ಫಲ್ಗುಣಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಗುರುಪುರ ನೂತನ ಸೇತುವೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಲೋಕಾರ್ಪಣೆಗೊಳಿಸಿದರು.
ಹಿಂದೆ ಇದ್ದ ಸೇತುವೆ ಶಿಥಿಲಾವಸ್ಥೆ ತಲುಪಿರುವುದರಿಂದ ನೂತನ ಸೇತುವೆ ಕಾಮಗಾರಿ ಆರಂಭಗೊಂಡಿತ್ತು. ಕಳೆದ ಫೆಬ್ರವರಿಯಲ್ಲಿ ಕಾಮಗಾರಿ ಆರಂಭವಾಗಿದ್ದು, ಎರಡು ವರ್ಷದೊಳಗೆ ಸೇತುವೆ ನಿರ್ಮಿಸಲು ಅವಧಿ ನೀಡಲಾಗಿತ್ತು. ಆದರೆ, ಗುತ್ತಿಗೆ ವಹಿಸಿಕೊಂಡ ಮೊಗ್ರೋಡಿ ಕನ್ಸ್ಸ್ಟ್ರಕ್ಷನ್ ಕೇವಲ ಒಂದು ವರ್ಷದೊಳಗೆ ಕಾಮಗಾರಿ ಸಂಪೂರ್ಣಗೊಳಿಸಿ ಬಿಟ್ಟುಕೊಟ್ಟಿದ್ದಾರೆ. ಈ ಸೇತುವೆಯನ್ನು ಸುಮಾರು 32.42 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ.
ಈ ಸಂದರ್ಭ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಗುರುಪುರ ಸೇತುವೆಯ ಕಾಮಗಾರಿ ಕಾಲಾವಧಿಗಿಂತ ಮೊದಲೇ ಪೂರ್ಣಗೊಂಡು ರಾಜ್ಯಕ್ಕೆ ಮಾದರಿಯಾಗಿದೆ. ಈ ತ್ವರಿತಗತಿಯ ಕಾಮಗಾರಿ ಗ್ರಾಮರಾಜ್ಯದ ಕಲ್ಪನೆಗೆ ಹಾಗೂ ರಾಮರಾಜ್ಯದ ಕಲ್ಪನೆಗೆ ಪೂರಕ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಮಾತನಾಡಿ, ಗುರುಪುರ ಸೇತುವೆಯ ಕಾಮಗಾರಿಯನ್ನು ಮೊಗ್ರೋಡಿ ಕನ್‌ಸ್ಟ್ರಕ್ಷನ್‌ನ ಗುತ್ತಿಗೆದಾರ ಸುಧಾಕರ್ ಶೆಟ್ಟಿಯವರು ಅವಧಿಗಿಂತ ಮೊದಲೇ ಪೂರ್ಣಮಾಡಿದ್ದಾರೆ. ಆದರೆ, ಕೋವಿಡ್-19 ಸೋಂಕಿನ ಪರಿಣಾಮ ಲೋಕಾರ್ಪಣೆ ಎರಡು ತಿಂಗಳು ತಡವಾಯಿತು. ಹಳೆಯ ಸೇತುವೆ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದ್ದು, ನೂತನ ಸೇತುವೆಯಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡದಿದ್ದಲ್ಲಿ ತೊಂದರೆ ಸಂಭವಿಸಬಹುದು ಎನ್ನುವ ಕಾರಣಕ್ಕೆ ಸೇತುವೆಯ ಲೋಕಾರ್ಪಣೆ ಇಂದು ಮಾಡಲಾಯಿತು ಎಂದರು. ಕುಲಶೇಖರ-ಮೂಡುಬಿದಿರೆ ಚತುಷ್ಪಥ ರಸ್ತೆ ಕಾಮಗಾರಿ ಆದಷ್ಟು ಶೀಘ್ರದಲ್ಲಿ ಆರಂಭಗೊಳ್ಳಲಿದೆ ಎಂದು ನಳಿನ್ ಕುಮಾರ್ ಕಟೀಲ್ ಮಾಹಿತಿ ನೀಡಿದರು.