ಮಂಗಳೂರು : ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ರೂ. 70 ಲಕ್ಷ ಮೌಲ್ಯದ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ನವೆಂಬರ್ 09 ಮತ್ತು 13 ರಂದು ಮಂಗಳೂರು ಕಸ್ಟಮ್ಸ್ ಅಧಿಕಾರಿಗಳು ಇಂಡಿಗೋ ಫ್ಲೈಟ್ 6E1163 ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಫ್ಲೈಟ್ IX814 ಮೂಲಕ ದುಬೈನಿಂದ ಮಂಗಳೂರಿಗೆ ಪ್ರಯಾಣಿಸುತ್ತಿದ್ದ ಇಬ್ಬರು ಪ್ರಯಾಣಿಕರನ್ನು ತಪಾಸಣೆ ನಡೆಸಿದಾಗ ಅಕ್ರಮವಾಗಿ ಚಿನ್ನ ಸಾಗಿಸುತ್ತಿರುವುದು ಕಂಡುಬಂದಿದೆ.
ಅವರು ಚಿನ್ನವನ್ನು ಟ್ರಾಲಿ ಬ್ಯಾಗ್‌ನಲ್ಲಿ ರಾಡ್‌ಗಳ ರೂಪದಲ್ಲಿ ಮರೆಮಾಡಿರುವುದು ಮತ್ತು ಗಡಿಯಾರ, ಬಾಲ್-ಪಾಯಿಂಟ್ ಪೆನ್, ಹೇರ್ ಟ್ರಿಮ್ಮರ್ಗಳಲ್ಲಿ ಮರೆ ಮಾಡಿ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ. ಇವರಿಂದ 322 ಗ್ರಾಂ ಚಿನ್ನ ವಶಪಡಿಸಿಕೊಳ್ಳಲಾಗಿದೆ. ಅದರ ಮೌಲ್ಯ ರೂ. 18,17,718/- ಎಂದು ಅಂದಾಜಿಸಲಾಗಿದೆ.
ನವೆಂಬರ್ 18ರಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಫ್ಲೈಟ್ IX 814 ಮೂಲಕ ದುಬೈನಿಂದ ಮಂಗಳೂರಿಗೆ ಪ್ರಯಾಣಿಸುತ್ತಿದ್ದ ಪ್ರಯಾಣಿಕನನ್ನು ತಪಾಸಣೆ ನಡೆಸಿದಾಗ ಅಕ್ರಮ ಚಿನ್ನ ಸಾಗಣೆ ಪತ್ತೆಯಾಗಿದೆ. ಈ ಪ್ರಯಾಣಿಕನ ಬ್ಯಾಗ್ ತಪಾಸಣೆ ಮಾಡುವಾಗ ಕೆಲವು ವಸ್ತುಗಳ ಕಪ್ಪು ಚಿತ್ರಗಳು ಕಂಡುಬಂದವು. ಇದು ಹೆವಿ ಮೆಟಲ್ ಇರುವಿಕೆಯನ್ನು ಸೂಚಿಸಿತ್ತು.
ಪ್ರಯಾಣಿಕನ ಬ್ಯಾಗ್ ತಪಾಸಣೆ ನಡೆಸಿದಾಗ ಎರಡು ಕಾರ್ ಸ್ಪೀಕರ್‌ಗಳಲ್ಲಿ 2 ವೃತ್ತಾಕಾರದ ತುಂಡುಗಳು, ಏರ್‌ಪಾಡ್‌ನಲ್ಲಿ 2 ಆಯತಾಕಾರದ ತುಂಡು ತುಣುಕುಗಳು ಮತ್ತು ಪವರ್ ಅಡಾಪ್ಟರ್‌ನಲ್ಲಿ ಒಂದು ಆಯತಾಕಾರದ ಚಿನ್ನದ ತುಂಡು ಪತ್ತೆಯಾಗಿದೆ. ಈತನ ಬಳಿ 857 ಗ್ರಾಂ ಚಿನ್ನ ಪತ್ತೆಯಾಗಿದ್ದು, ಇದರ ಮೌಲ್ಯ ರೂ. 51,84,850 ಎಂದು ಅಂದಾಜಿಸಲಾಗಿದೆ. ಮೂವರು ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಬ್ಬರು ವಶಕ್ಕೆ ( ಪ್ರತ್ಯೇಕ ಪ್ರಕರಣ) : ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಓರ್ವ ಪುರುಷ ಮತ್ತು ಮಹಿಳೆಯನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ (ಅಕ್ಟೋಬರ್ 19-2023) ಪಡೆದಿದ್ದರು. ಅಕ್ಟೋಬರ್ 17 ರಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಮೂಲಕ ದುಬೈನಿಂದ ಮಂಗಳೂರಿಗೆ ಪ್ರಯಾಣಿಸುತ್ತಿದ್ದ ಇಬ್ಬರು ಪ್ರಯಾಣಿಕರು ಚಿನ್ನವನ್ನು ಅಕ್ರಮವಾಗಿ ಸಾಗಿಸುತ್ತಿದ್ದರು. ಈ ವಿಮಾನದಲ್ಲಿದ್ದ ಒಬ್ಬ ಮಹಿಳಾ ಮತ್ತು ಪುರುಷ ಪ್ರಯಾಣಿಕರನ್ನು ತಡೆದು ಪರಿಶೀಲಿಸಲಾಗಿತ್ತು.
ಮಾಸ್ಕ್ ಧರಿಸಿದ್ದ ಪುರುಷ ಪ್ರಯಾಣಿಕನ ಕೆನ್ನೆಯ ಭಾಗವು ಅಸಹಜವಾಗಿ ಕಂಡುಬಂದಿತ್ತು. ಆತನನ್ನು ಮತ್ತಷ್ಟು ತಪಾಸಣೆ ನಡೆಸಿದಾಗ ಅವನ ಬಾಯಿಯೊಳಗೆ ಎರಡು ಚಿನ್ನದ ತುಂಡುಗಳನ್ನು ಅಡಗಿಸಿಡಲಾಗಿತ್ತು. ಮಹಿಳಾ ಪ್ರಯಾಣಿಕೆಯನ್ನು ಪರಿಶೀಲಿಸಿದಾಗ ಆಕೆಯ ಕೂದಲಿನ ರಬ್ಬರ್ ಬ್ಯಾಂಡ್‌ನಲ್ಲಿ ಚಿನ್ನವನ್ನು ಮರೆಮಾಡಲಾಗಿತ್ತು. ಎರಡು ಪ್ರಕರಣಗಳಲ್ಲಿ, ಒಟ್ಟು 191 ಗ್ರಾಂ ತೂಕದ 24 ಕ್ಯಾರೆಟ್ ಪರಿಶುದ್ಧತೆಯ ಚಿನ್ನ ವಶಪಡಿಸಿಕೊಳ್ಳಲಾಗಿತ್ತು. ಇದರ ಮೌಲ್ಯ ರೂ. 11,44,090/- ರೂ ಎಂದು ಅಂದಾಜಿಸಲಾಗಿತ್ತು. ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು.
ಇದನ್ನೂ ಓದಿ: ಅಕ್ರಮ ಚಿನ್ನ ಸಾಗಾಟ: ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಬ್ಬರು ವಶಕ್ಕೆ